ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸಕ್ಕೆ ಬಂದಿದ್ದ ಅಪ್ಘಾನಿಸ್ತಾನದ ವಿದ್ಯಾರ್ಥಿಯ ಐಫೋನ್ ಕಳೆದು ಹೋಗಿ ಬಸ್ ನಿರ್ವಾಹಕರೊಬ್ಬರ ಪ್ರಾಮಾಣಿಕತೆಯಿಂದ ಮತ್ತೆ ಮರಳಿ ಸಿಕ್ಕಿದೆ.
ಅಫ್ಘಾನಿಸ್ತಾನದ ಮಿರ್ ಖಾಸೆಂ ನಿವಾಸಿ ಸದ್ದಾಣ ಮುಕ್ರೇಷಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಬುಧವಾರ ಕಾಲೇಜು ಮುಗಿಸಿ ವಿದ್ಯಾರ್ಥಿ ನಿಲಯಕ್ಕೆ ಹೋಗುವ ವೇಳೆ ಕಿಸೆಯಲ್ಲಿದ್ದ ಐಫೋನ್ ಮೊಬೈಲ್ ಕಳೆದುಹೋಗಿತ್ತು.
ಅವರು ಮೊಬೈಲ್ನ್ನು ಹೊಸದಾಗಿ ಖರೀದಿಸಿದ್ದು ಮೊಬೈಲ್ನಲ್ಲಿದ್ದ ಸಿಮ್ನ ಆ್ಯಕ್ಟಿವೇಶನ್ ಕೂಡ ಮಾಡಿರಲಿಲ್ಲ. ಇದರಿಂದ ಆ ಮೊಬೈಲ್ಗೆ ಕಾಲ್ ಮಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಹಾಸ್ಟೆಲ್ ಸುತ್ತಮುತ್ತ ಸಿಸಿಟಿವಿ ಪರಿಶೀಲಿಸಿದರೂ ಅಲ್ಲಿಯೂ ಪತ್ತೆಯಾಗಿರಲಿಲ್ಲ. ಆದರೆ ಈ ಮೊಬೈಲ್ ಖಾಸಗಿ ಬಸ್ನಲ್ಲಿ ಬಸ್ ನಿರ್ವಾಹಕ ನಾರಾಯಣ ಎಂಬವರಿಗೆ ಸಿಕ್ಕಿತ್ತು. ಆ ಐಪೋನ್ನನ್ನು ತೆಗೆದುಕೊಂಡ ಅವರು ಮೊಬೈಲ್ ಗೆ ಮೊಬೈಲ್ ಕಳೆದುಕೊಂಡವರ ಕರೆ ಬರುವ ನಿರೀಕ್ಷೆಯಲ್ಲಿದ್ದರು. ಆದರೆ ಕರೆ ಬಾರದ ಹಿನ್ನೆಲೆಯಲ್ಲಿ ಮೊಬೈಲನ್ನು ಪೊಲೀಸ್ ಠಾಣೆಗೆ ಮುಟ್ಟಿಸುವ ನಿರ್ಧಾರಕ್ಕೆ ಬಂದಿದ್ದರು.
ಪೊಲೀಸರ ಬಳಿ ಹೋಗುವ ಮೊದಲು ಮೊಬೈಲ್ಗೆ ಹಾಕಲಾದ ರಕ್ಷಾ ಕವರನ್ನು ತೆರೆದು ನೋಡಿದಾಗ ಅದರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಶೀದಿಯೊಂದು ಸಿಕ್ಕಿತ್ತು. ಅದನ್ನು ಕಂಡ ಅವರು ನೇರ ಕಾಲೇಜಿನ ಆಡಳಿತ ಸೌಧಕ್ಕೆ ತೆರಳಿ ಅಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯ ಅವರನ್ನು ಭೇಟಿಯಾದರು. ಮೊಬೈಲ್ ಬಗ್ಗೆ ತಿಳಿಸಿ ಅವರ ಮೂಲಕ ಮೊಬೈಲ್ ವಾರಸುದಾರರನ್ನು ಪತ್ತೆ ಹಚ್ಚಿದರು.
ಈ ಮೂಲಕ ಅಫ್ಘಾನಿಸ್ತಾನದ ವಿದ್ಯಾರ್ಥಿಗೆ ಕಳೆದುಹೋದ ಮೊಬೈಲನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಮೊಬೈಲನ್ನು ಪಡೆದುಕೊಂಡ ಅಫ್ಘಾನ್ ವಿದ್ಯಾರ್ಥಿ ಭಾರತೀಯರ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.
Click this button or press Ctrl+G to toggle between Kannada and English