ಬೆಂಗಳೂರು: ಜುಲೈ 27 ರಂದು ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ಗ್ರಹಣದ ಮುನ್ನಾದಿನ (ಜುಲೈ 26) ರಂದು ಗುರುವಾರ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಹೆಚ್. ಡಿ. ಕುಮಾರಸ್ವಾಮಿ ಅವರು ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದರು. ಅದೇ ರೀತಿ ಸಿಎಂ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರೊಂದಿಗೆ ತಿರುಪತಿ ತೆರಳಿ, ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ವಾಪಸ್ ಆಗಲಿದ್ದಾರೆ. ಇವರ ಜೊತೆ ದೇವೇಗೌಡರು, ಅವರ ಪತ್ನಿ ಚೆನ್ನಮ್ಮ ಸಹ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇವೇಗೌಡರು, ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಸಚಿವ ಹೆಚ್.ಡಿ.ರೇವಣ್ಣ ಜೊತೆ ಜು.25 ರಂದು ಅಮರನಾಥ ಯಾತ್ರೆ ಕೈಗೊಂಡಿದ್ದರು. ಆದರೆ ಭಾರಿ ಮಳೆ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ದೇವೇಗೌಡರು, ಸಿಎಂ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರೊಂದಿಗೆ ತಿರುಪತಿಗೆ ತೆರಳಿ, ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಧಿಕಾರ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದ ಮೇಲೆಯೂ ದೇವೇಗೌಡರ ಕುಟುಂಬದ ದೈವಭಕ್ತಿ ದೊಡ್ಡಮಟ್ಟದಲ್ಲಿ ಹೊರಜಗತ್ತಿಗೆ ಕಾಣುತ್ತಿದೆ. ಕುಮಾರಸ್ವಾಮಿ, ದೇವೇಗೌಡರು ಸೇರಿದಂತೆ ಸಚಿವ ರೇವಣ್ಣ ಅವರು ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ತೆರಳಿ ಹೋಮ- ಹವನ ಕಾರ್ಯ, ವಿಶೇಷ ಪೂಜೆ ಸಲ್ಲಿಸುತ್ತಾರೆ.
ಇನ್ನು ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರ ದೈವನಂಬಿಕೆ ಮಕ್ಕಳಿಗಿಂತ ಕಮ್ಮಿಯೇನು ಇಲ್ಲ. ಎಲ್ಲ ವಿಚಾರದಲ್ಲಿಯೂ ಅವರು ದೇವರ ಮೊರೆ ಹೋಗುತ್ತಾರೆ ಎನ್ನುತ್ತಿವೆ ಮೂಲಗಳು.
Click this button or press Ctrl+G to toggle between Kannada and English