ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆ. 2 ರಂದು 13 ಜಿಲ್ಲೆಗಳಲ್ಲಿ ಬಂದ್

2:36 PM, Thursday, July 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

Somashekar ಹುಬ್ಬಳ್ಳಿ : ಪ್ರತ್ಯೇಕ ಉತ್ತರ ಕರ್ನಾಟಕಕಕ್ಕೆ ಆಗ್ರಹಿಸಿ ಆ. 2 ರಂದು 13 ಜಿಲ್ಲೆಗಳಲ್ಲಿ ಬಂದ್ ಆಚರಿಸಲಾಗುವುದು ಎಂದು ಉ.ಕ.ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸೋಮಶೇಖರ ಕೋತಂಬರಿ ಹೇಳಿದ್ದಾರೆ.

ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಮ್ಮ ಬಂದ್ ಕರೆಗೆ ಈಗಾಗಲೇ 25 ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು. ಈ ಬಾರಿಯ ಬಜೆಟ್ ನಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶೇ.82ರಷ್ಟು ಅನುದಾನವನ್ನು ದಕ್ಷಿಣ ಕರ್ನಾಟಕಕಕ್ಕೆ ನೀಡಿದ್ದಾರೆ. ಮತ್ತು ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಎಂದು ಅರೋಪಿಸಿದರು.

ಮಹದಾಯಿ ವಿವಾದ, ರೈತರ ಸಂಪೂರ್ಣ ಸಾಲ ಮನ್ನಾ, ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಈ ಭಾಗದ ಜನರ ಬೇಡಿಕೆಗಳನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಕಡೆಗಣಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

ಇನ್ನೋರ್ವ ರೈತ ಮುಖಂಡ ಬಸವರಾಜ ಕರಿಗಾರ ಮಾತನಾಡಿ, ಪ್ರತ್ಯೇಕ ರಾಜ್ಯದಿಂದ ಸಾಕಷ್ಟು ಅನುಕೂಲಗಳಾಗಲಿವೆ, ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಮತ್ತು ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯದಿಂದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಈ ಭಾಗದಲ್ಲಿ 124, ಹಿಂದುಳಿದ ಮತ್ತು 25 ಕ್ಕೂ ಹೆಚ್ಚು ತಾಲೂಕುಗಳು ಅತೀ ಹಿಂದುಳಿದ ಪ್ರದೇಶಗಳಿವೆ ಎಂದು ಡಾ.ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಡಾ.ಸ್ವಾಮಿನಾಥನ್ ಆಯೋಗದ ವರದಿಯಲ್ಲಿಯೂ ಕೂಡ ಈ ಭಾಗದಲ್ಲಿ ನೀರಾವರಿ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಅನ್ಯಾಯವಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದರು.

ಕೂಡಲೇ ಎರಡೂ ವರದಿಗಳನ್ನು ಸರಕಾರ ಜಾರಿಗೆ ತರಬೇಕು ಎಂದ ಬಸವರಾಜ, ಬೆಂಗಳೂರಿನ ಮೆಟ್ರೋ ಯೋಜನೆಗೆ ರಾಜ್ಯ ಸರಕಾರ 50 ಸಾವಿರ ಕೋಟಿ ರೂ. ಕಾಯ್ದಿರಿಸುವಾಗ ಉತ್ತರ ಕರ್ನಾಟಕಕ್ಕೆ 28 ಸಾವಿರ ಕೋಟಿ ರೂ. ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಆದರೆ ಈ ಭಾಗಕ್ಕೆ ಕೇವಲ 2 ಸಾವಿರ ಕೋಟಿ ರೂ.ಗಳಷ್ಟೇ ನೀಡಿ ಮಲತಾಯಿ ಧೋರಣೆ ಮಾಡಲಾಗಿದೆ ಎಂದರು.

ಆದ್ದರಿಂದ ಹಲವಾರು ವರ್ಷಗಳಿಂದ ಎಲ್ಲ ರೀತಿಯಿಂದಲೂ ಈ ಭಾಗದ ಜನತೆಗೆ ಅನ್ಯಾಯವಾಗುತ್ತಿದ್ದು, ಕಾರಣ ಬಂದ್ ಆಚರಿಸಿ ಪ್ರತಿಭಟಿಸಲು ತೀರ್ಮಾನಿಸಲಾಗಿದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English