ಮಂಗಳೂರು : ದುಬೈಗೆ ತೆರಳಬೇಕಾಗಿದ್ದ 188 ಪ್ರಯಾಣಿಕರು ಅಸೌಖ್ಯದ ಕಾರಣ ಪೈಲಟ್ ಬಾರದ ಹಿನ್ನಲೆಯಲ್ಲಿ ವಿಮಾನದಲ್ಲಿ ರಾತ್ರಿ ಕಳೆದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪೈಲೆಟ್ ಬಾರದ ಕಾರಣ ದುಬೈಗೆ ಹಾರಬೇಕಿದ್ದ ಸ್ಪೈಸ್ ಜೆಟ್ ವಿಮಾನ ರನ್ ವೇ ಯಲ್ಲೇ ಬಾಕಿಯಾಗಿದೆ. ನಿನ್ನೆ ತಡ ರಾತ್ರಿ 12.45ಕ್ಕೆ ಮಂಗಳೂರಿನಿಂದ ದುಬೈಗೆ ಸ್ಪೈಸ್ ಜೆಟ್ -ಎಸ್ ಜಿ59 ವಿಮಾನ ಹಾರಬೇಕಿತ್ತು .
188 ಪ್ರಯಾಣಿಕರು ವಿಮಾನ ಏರಿ ಕುಳಿತ ಬಳಿಕ ಪೈಲೆಟ್ ಗೆ ಅನಾರೋಗ್ಯ ಕಾಡಿದೆ. ಈ ಹಿನ್ನೆಲೆಯಲ್ಲಿ ಪೈಲೆಟ್ ವಿಮಾನ ಪ್ರವೇಶಿಸಲಿಲ್ಲ. ಈ ಪರಿಣಾಮ ವಿಮಾನ ಹಾರಾಟ ಸ್ಥಗಿತಗೊಳಿಸಲಾಯಿತು.
ವಿಮಾನದಲ್ಲಿದ್ದ 188 ಪ್ರಯಾಣಿಕರು ರನ್ ವೇ ಮೇಲೆ ವಿಮಾನದಲ್ಲೇ ಬಾಕಿಯಾಗಿ ರಾತ್ರಿ ಕಳೆದಿದ್ದಾರೆ. ಈ ನಡುವೆ ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ದುಬೈಗೆ ಪ್ರಯಾಣಿಸ ಬೇಕಾಗಿದ್ದ ಈ ವಿಮಾನಕ್ಕೆ ಬದಲಿ ಪೈಲೆಟ್ ಇಲ್ಲದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ. ಇಂದು ಮುಂಜಾನೆ ಬೆಳಗ್ಗೆ 7 ಗಂಟೆಗೆ ಮತ್ತೆ ದುಬೈಗೆ ಪ್ರಯಾಣ ಬೆಳೆಸುವ ಸಿದ್ಧತೆ ನಡೆಸಲಾಗಿತ್ತು. ಆದರೆ, ಪೈಲೆಟ್ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದರಿಂದ ಬೆಳಗ್ಗಿನ ಪ್ರಯಾಣವನ್ನು ರದ್ದು ಗೊಳಿಸಲಾಯಿತು. ಸ್ಪೈಸ್ ಜೆಟ್ ಕಾಂಟ್ರೆಕ್ಟ್ ಬೇಸ್ ಮೇಲೆ ಪೈಲೆಟ್ ನಿಯೋಜಿಸಿರುವ ಹಿನ್ನೆಲೆಯಲ್ಲಿ ಪರ್ಯಾಯ ಪೈಲೆಟ್ ದೂರದ ಟರ್ಕಿಯಿಂದ ಬರಬೇಕಾದ ಕಾರಣ ಇಂದು ಸಂಜೆ 4 ಗಂಟೆಯ ಬಳಿಕ ವಿಮಾನ ದುಬೈಗೆ ಹಾರಲಿದೆ. ಈ ಹಿನ್ನೆಲೆಯಲ್ಲಿ ವಿಮಾನದ ಪ್ರಯಾಣಿಕರನ್ನು ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ.
ಈ ನಡುವೆ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಿನ್ನೆ ಯಿಂದ ಆಹಾರ ಇಲ್ಲ. ವಿಮಾನದಲ್ಲಿ ಮಹಿಳೆಯರು ಮಕ್ಕಳು ಇದ್ದರೂ ವಿಮಾನ ಸಂಸ್ಥೆಯವರು ಯಾರಿಗೂ ಆಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬುಧವಾರ ಬೆಳಗ್ಗಿನವರೆಗೆ ವಿಮಾನದಲ್ಲಿ ಕಳೆದಿದ್ದೇವೆ. ವಿಮಾನ ಸಂಸ್ಥೆ ಯವರನ್ನು ಪ್ರಶ್ನೆ ಮಾಡಿದರೆ ದರ್ಪದ ಉತ್ತರ ನೀಡುತ್ತಾರೆ. ಇವತ್ತು ದುಬೈ ನಲ್ಲಿ ಮೀಟಿಂಗ್ ನಲ್ಲಿ ಭಾಗವಹಿಸಬೇಕಾಗಿತ್ತು. ವಿಮಾನ ರದ್ದುಗೊಂಡಿರೋ ಕಾರಣ ಹೋಗೋಕೆ ಆಗ್ತಾ ಇಲ್ಲ ಎಂದು ರಶೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English