ಮಂಗಳೂರು : ರಾಷ್ಟ್ರೀಯ ಸಾರಿಗೆ ನೌಕರರ ಒಕ್ಕೂಟ ಕರೆ ನೀಡಿರುವ ಮುಷ್ಕರದಿಂದಾಗಿ ಮಂಗಳೂರು– ಕಾಸರಗೋಡು ನಡುವಿನ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ಘಟಕದಿಂದ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧೆಡೆಗೆ ಪ್ರತಿನಿತ್ಯ 35 ಬಸ್‌ಗಳು ಸಂಚರಿಸುತ್ತವೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ 35 ಬಸ್‌ಗಳು ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿವೆ. ಈ ಎಲ್ಲ ಬಸ್‌ಗಳ ಸಂಚಾರ ಮಂಗಳವಾರ ಬೆಳಿಗ್ಗೆಯಿಂದ ಸ್ಥಗಿತವಾಗಿದೆ. ಪುತ್ತೂರು, ಸುಳ್ಯದಿಂದಲೂ ಕೇರಳದ ವಿವಿಧೆಡೆಗೆ ಸಂಚರಿಸುವ ಬಸ್‌ಗಳ ಸಂಚಾರವೂ ಸ್ಥಗಿತವಾಗಿದೆ.
ಮಂಗಳೂರು ನಗರದಿಂದ ಕರ್ನಾಟಕ– ಕೇರಳದ ಗಡಿಭಾಗ ತಲಪಾಡಿ ಟೋಲ್ ಗೇಟ್‌ವರೆಗೆ ನಗರ ಸಾರಿಗೆ ಬಸ್‌ಗಳಲ್ಲಿ ಹೋಗುತ್ತಿರುವ ಪ್ರಯಾಣಿಕರು, ಅಲ್ಲಿಂದ ಬೇರೆ ವಾಹನಗಳಲ್ಲಿ ಕಾಸರಗೋಡಿನತ್ತ ಪ್ರಯಾಣಿಸುತ್ತಿದ್ದಾರೆ. ಜಿಲ್ಲೆಯ ಉಳಿದೆಡೆ ವಾಹನ ಸಂಚಾರ ಎಂದಿನಂತೆ ಇದೆ. ಮುಷ್ಕರದಿಂದ ಯಾವುದೇ ಸಮಸ್ಯೆಯೂ ಆಗಿಲ್ಲ.
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಕ ವಿ.ಐ.ಹೆಗ್ಡೆ, ‘ಕಾಸರಗೋಡು ಸೇರಿದಂತೆ ಕೇರಳ ರಾಜ್ಯದಲ್ಲಿ ಮುಷ್ಕರಕ್ಕೆ ಪೂರ್ಣ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಮಂಗಳೂರು– ಕಾಸರಗೋಡು ನಡುವೆ ಸರ್ಕಾರಿ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ’ ಎಂದರು.
Click this button or press Ctrl+G to toggle between Kannada and English