ಮಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಶಾಶ್ವತ ಪರಿಹಾರ ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದು ಬೇಕಾಗಿಲ್ಲ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕಿಡಿಕಾರಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ 2017-18 ರಲ್ಲಿ 12,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರಿಂದ ರಾಷ್ಟ್ರೀಯ ಬ್ಯಾಂಕ್ನಲ್ಲಿರುವ 30 ಸಾವಿರ ಕೋಟಿ ರೂ. ಸರ್ಕಾರಕ್ಕೆ ಹೊರೆಯಿದೆ. ಆ ಹೊರೆ ತಪ್ಪಿಸಿದರೆ ಅದೇ ಹಣದಲ್ಲಿ ರೈತರಿಗೆ ಬೇಕಾದ ಹನಿ ನೀರಾವರಿ, ಕೋಲ್ಡ್ ಸ್ಟೋರೇಜ್ ಮೊದಲಾದ ಸಲಕರಣೆ ನೀಡಲು ಸಾಧ್ಯವಿದೆ. ಆದರೆ ಕೇಂದ್ರಕ್ಕೆ ಇದು ಬೇಕಾಗಿಲ್ಲ ಎಂದರು.
ರಾಜ್ಯದಲ್ಲಿ ಅಕ್ರಮ ಬಾಂಗ್ಲಾದೇಶಿಗರು ಸೇರಿದಂತೆ ಅನಧಿಕೃತವಾಗಿ ಬಂದ ವಿದೇಶಿಗರನ್ನು ಹೊರ ಕಳುಹಿಸಲಾಗುವುದು. ನಾವೇ ಅವರಿಗೆ ವಿಮಾನ ಟಿಕೆಟ್ ನೀಡಿ ಅವರ ದೇಶಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆದರೆ ಸ್ಥಳೀಯವಾಗಿ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡುವುದು ಅವರವರಿಗೆ ಬಿಟ್ಟದ್ದು ಎಂದರು.
ಶಿರೂರು ಸ್ವಾಮೀಜಿಯ ಆರಾಧನೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಅದು ತನಿಖೆ ಹಂತದಲ್ಲಿದೆ. ತನಿಖೆ ಸಂಪೂರ್ಣವಾಗಿಲ್ಲ. ಪೊಲೀಸರು ಯಾಕೆ ಆ ತೀರ್ಮಾನಕ್ಕೆ ಬಂದಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.
ಮೈತ್ರಿ ಸರ್ಕಾರದ ಪ್ರಮಾಣವಚನಕ್ಕೆ ಆದ ಖರ್ಚಿನ ಬಗ್ಗೆ ಬಿಜೆಪಿ ಆಕ್ಷೇಪ ಅವರ ಸಣ್ಣತನ ತೋರಿಸುತ್ತದೆ. ರಾಜ್ಯಕ್ಕೆ ಬಂದ ಅತಿಥಿಗಳಿಗೆ ಊಟ ಕೊಟ್ಟದಕ್ಕೆ ಲೆಕ್ಕ ಹಾಕಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಸೋಲಿಗೆ ಹಿಂದೂಗಳ ನಿರ್ಲಕ್ಷ್ಯ ಕಾರಣ ಎಂದ ಜೆಡಿಎಸ್ ಶಾಸಕ ಭೋಜೆಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಭೋಜೆಗೌಡರ ಅಭಿಪ್ರಾಯ ನಾನೇಕೆ ಒಪ್ಪಿಕೊಳ್ಳಬೇಕು. ನಮ್ಮ ವಿಶ್ಲೇಷಣೆ ಬೇರೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಪ್ರಮೋದ್ ಮಧ್ವರಾಜ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English