ಮಂಗಳೂರು: ಕರಾವಳಿಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿ ಹಾಗು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಬಿರುಸುಗೊಂಡಿದೆ . ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಗಂಡಿಬಾಗಿಲು ಪ್ರದೇಶದಲ್ಲಿ ಭಾರೀ ಗುಡ್ಡ ಕುಸಿತ ಉಂಟಾಗಿದೆ. ಏಕಾಏಕಿ ಗುಡ್ಡ ಕುಸಿದ ಪರಿಣಾಮ ಮನೆ ಹಾಗು ಅಪಾರ ಪ್ರಮಾಣದಲ್ಲಿ ಕೃಷಿ, ತೋಟ ನಾಶವಾಗಿದೆ.
ಬೆಟ್ಟದ ಮೇಲಿಂದ ಹರಿದು ಬರುವ ನೀರಿನ ರಭಸಕ್ಕೆ 3.5ಕಿ.ಮೀ ವರೆಗೂ ರಬ್ಬರ್, ಅಡಿಕೆ ಮರಗಳು ಸೇರಿದಂತೆ ಬಂಡೆಕಲ್ಲುಗಳು ಕೊಚ್ಚಿಹೋಗಿವೆ. ಭೂಕುಸಿತದಿಂದ ನಾಲ್ವರು ಗಾಯ ಗೊಂಡಿದ್ದಾರೆ. ಜೋಸೆಫ್ ಎಂಬುವವರ ಸುಮಾರು 300 ಕ್ಕೂ ಅಡಿಕೆ ಸೇರಿ ಇನ್ನಿತರ ಕೃಷಿ ನಾಶವಾಗಿದೆ.
ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಶಿಶಿಲೇಶ್ವರ ದೇವಸ್ಥಾನ ಆವರಣಕ್ಕೆ ನೆರೆ ನೀರು ನುಗ್ಗಿದೆ. ಬೆಳ್ತಂಗಡಿ , ಸುಳ್ಯ ಭಾಗದಲ್ಲಿ ಹಲವೆಡೆ ಕೃಷಿ ಜಮೀನಿಗೆ ಮಳೆ ನೀರು ನುಗ್ಗಿದ್ದು, ಗ್ರಾಮೀಣ ಭಾಗದ ಮನೆಗಳನ್ನು ಕೂಡ ನೆರೆ ನೀರು ಆವರಿಸಿದೆ.
ಪರಿಶಿಷ್ಟರ ಕಾಲನಿಯ ಹಲವು ಮನೆಗಳಿಗೆ ನುಗ್ಗಿದ್ದ ನೇರೆ ನೀರು ಕೊಂಚ ಇಳಿದಿದೆ. ಜಿಲ್ಲೆಯ ಕುಮಾರಧಾರಾ ಮತ್ತು ನೇತ್ರಾವತಿ ಸೇರಿದಂತೆ ಇನ್ನಿತರ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಸುಬ್ರಹ್ಮಣ್ಯ ಹಾಗು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಶ್ರೀ ಕ್ಷೇತ್ರದ ಸ್ನಾನ ಘಟ್ಟ ಮುಳುಗಡೆಯಾಗಿ ಯಾತ್ರಿಕರು ಸಂಕಷ್ಟ ಪಡುವಂತಾಗಿದೆ. ಮಂಗಳೂರು ಹೊರವಲಯದ ಹೆಜಮಾಡಿ ಗ್ರಾಮದಲ್ಲಿ ಸುಮಾರು 200 ಮೀ ಗಳಷ್ಟು ಕಡಲ್ಕೊರೆತ ಉಂಟಾಗಿದೆ.
Click this button or press Ctrl+G to toggle between Kannada and English