ಮಂಗಳೂರು: ದೇಶ ಕಂಡ ಅಪ್ರತಿಮ ಜನನಾಯಕರ ಪೈಕಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ. ಜೀವನದುದ್ದಕ್ಕೂ ಮಾತುಗಾರಿಕೆ, ಕವನಗಳ ಮೂಲಕ ಪನ್ನೀರಿನ ವಾತಾವರಣವನ್ನು ಸೃಷ್ಟಿಸುತ್ತಿದ್ದ ವಾಜಪೇಯಿ ಅವರನ್ನು ಅಜಾತಶತ್ರು ಎಂದೇ ಗುರುತಿಸಲಾಗುತ್ತಿದೆ. ಲೋಕ ಜ್ಞಾನದ ಮೂಲಕ ದೇಶ ಹಾಗೂ ದೇಶವಾಸಿಗಳಿಗೆ ದಾರ್ಶನಿಕ ದೃಷ್ಟಿಯನ್ನು ಒದಗಿಸುತ್ತಿದ್ದ ನೇತಾರ ಈಗ ಕೇವಲ ನೆನಪು ಮಾತ್ರ.
ಅಟಲ್ ಅವರಿಗೂ ಮಂಗಳೂರಿಗೂ ಅವಿನಾಭಾವ ಸಂಬಂಧವಿದೆ. ಮಂಗಳೂರು ಎಂದೊಡನೆ ಪುಳಕಿತರಾಗುತ್ತಿದ್ದರು ವಾಜಪೇಯಿ. ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಾಜಪೇಯಿ ಅವರಿಗೆ ಅಪಾರ ಅಭಿಮಾನವಿತ್ತು. ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿ ಆಗುವ ಮೊದಲು ಹಾಗು ಹಾಗು ನಂತರ ದಿನಗಳಲ್ಲಿ ಬಹಳ ಸಲ ಮಂಗಳೂರು ಹಾಗು ಉಡುಪಿಗೆ ಭೇಟಿ ನೀಡಿದ್ದರು. ಮಂಗಳೂರಿಗೆ ಬಂದಾಗಲೇಲ್ಲಾ ಪಕ್ಷದ ಹಿರಿಯ ಮುಖಂಡರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಂಘ ಹಾಗು ಬಿಜೆಪಿ ಸಂಘ ಪರಿವಾರ ಬೆಳೆದ ರೀತಿಯ ಬಗ್ಗೆ ವಾಜಪೇಯಿ ಅವರಿಗೆ ಅಪಾರ ಅಭಿಮಾನ. ಅದರಲ್ಲೂ ಮಂಗಳೂರು ಲೋಕಸಭಾ ಕ್ಷೇತ್ರ ಬಿಜೆಪಿಗೆ ತಂದುಕೊಟ್ಟ ಸತತ ಗೆಲುವು, ಸಂಘ ಪರಿವಾರ ಬೆಳೆದ ರೀತಿಯನ್ನು ಅವರು ಮರೆತಿರಲಿಲ್ಲ. ಇಲ್ಲಿಯ ಸಂಘಪರಿವಾರ ಹಾಗು ಬಿಜೆಪಿ ಪಾಳಯದಲ್ಲಿರುವ ಶಿಸ್ತುಬದ್ಧತೆ ಬಗ್ಗೆ ಅವರಿಗೆ ಅಪಾರ ಅಭಿಮಾನವಿತ್ತು. ಇದನ್ನು ಅವರು ತಮ್ಮ ಹಲವಾರು ಭಾಷಣಗಳಲ್ಲಿ ಮಂಗಳೂರನ್ನು ಉಲ್ಲೇಖಿಸಿದ್ದರು. ‘ಐ ಜಸ್ಟ್ ಕಾಂಟ್ ಫಾರ್ಗೆಟ್ ಮಂಗಳೂರು’ ಎಂದು ಹೇಳುತ್ತಿದ್ದರು.
ದೇಶದ ಉದ್ದಗಲದಲ್ಲಿ ಕಾಂಗ್ರೆಸ್ ನ ಪ್ರಭಾವವಿದ್ದ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಜನಸಂಘ ಉಡುಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಉಡುಪಿ ನಗರಸಭೆಗೆ 1968ರಲ್ಲಿ ನಡೆದ ಚುನಾವಣೆಯಲ್ಲಿ ಯುವಕ ಡಾ. ವಿ ಎಸ್ ಆಚಾರ್ಯರ ನೇತೃತ್ವದಲ್ಲಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಡಾ. ವಿ ಎಸ್ ಆಚಾರ್ಯ ಅಧ್ಯಕ್ಷರಾಗಿ ಹಾಗು ಬಿ ಆರ್ ಶೆಟ್ಟಿ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈ ಸಂದರ್ಭದಲ್ಲಿ ಉಡುಪಿಗೆ ಆಗಮಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಡಾ ವಿ ಎಸ್ ಆಚಾರ್ಯ ಡ್ರೈವರ್ ಆಗಿ ಕಾರು ಚಲಾಯಿಸಿದ್ದರು. ಉಡುಪಿ ನಗರ ಸಭೆ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮಲಹೋರುವ ಪದ್ದತಿಯನ್ನು ನಿಷೇಧಿಸಿದಾಗ ವಾಜಪೇಯಿ ಅವರು ಹರ್ಷ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಾಜಪೇಯಿಯವರು ಹೆಮ್ಮೆಯಿಂದ ಮಾತನಾಡುತ್ತಿದ್ದರು.
ಮಾಜಿ ಪ್ರಧಾನಿ ವಾಜಪೇಯಿ ಉಡುಪಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಪೇಜಾವರ ಶ್ರೀಗಳ 4ನೇ ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಂಡ ಅವರು ಜನಸಂಘದ ಕಾಲದಲ್ಲಿ ಉಡುಪಿಯಲ್ಲಿ ಪ್ರಚಾರವನ್ನು ಕೂಡಾ ನಡೆಸಿದ್ದರು.
ಮಂಗಳೂರು ಲೋಕಸಭಾ ಕ್ಷೇತ ಸತತವಾಗಿ ಗೆಲುವು ತಂದು ಕೊಟ್ಟಾಗ ಮಂಗಳೂರು ಹಾಗು ಉಡುಪಿಗೆ ಆಗಮಿಸುತಿದ್ದ ವಾಜಪೇಯಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಸಹಸ್ರಾರು ಜನರನ್ನು ಉದ್ದೇಶಿಸಿ ಮಾತನಾಡಿದ್ದ ಅಟಲ್ ಬಿಹಾರಿ ವಾಜಪೇಯಿ, ಅವರ ನೆನಪುಗಳು ಇಂದಿಗೂ ಫೋಟೋ ರೂಪದಲ್ಲಿ ಅಚ್ಚಳಿದು ಉಳಿದುಕೊಂಡಿವೆ.
Click this button or press Ctrl+G to toggle between Kannada and English