ಮಂಗಳೂರು : ಭಾರತವು ಹಬ್ಬಗಳ ತವರೂರು. ಈ ಹಬ್ಬಗಳು ಪರಸ್ಪರ ಸ್ನೇಹ-ವಿಶ್ವಾಸ, ಗೌರವವನ್ನು ಇಮ್ಮಡಿಗೊಳಿಸುತ್ತಾ ಮಾನವನ ಜೀವನದಲ್ಲಿ ಸುಖ-ಶಾಂತಿಯನ್ನು ತುಂಬುತ್ತಿವೆ. ಮನುಷ್ಯನಲ್ಲಿ ಹಲವು ರೀತಿಯ ಮಾನವೀಯ ಗುಣಗಳನ್ನು ತುಂಬುತ್ತಾ ಅವನನ್ನು ಗುಣವಂತನ್ನಾಗಿ ಹಬ್ಬಗಳು ಮಾಡುತ್ತಿವೆ. ಈ ನಾಡಿನಲ್ಲಿ ಆಚರಿಸುವ ಹಬ್ಬಗಳಲ್ಲಿ ಮಾನವನ ರಕ್ಷಣೆಯು ಅಡಗಿದೆ. ಆಧುನಿಕ ವಿಜ್ಞಾನ ಯುಗದಲ್ಲಿಯೂ ಕೂಡ ಹಬ್ಬಗಳ ಆಚರಣೆಯು ತನ್ನದೇ ಆದ ಮಹತ್ವವನ್ನು ಹೊಂದಿದೆ.
ಭಾರತಾದ್ಯಂತ ವಿಭಿನ್ನ ರೀತಿಯ ರಕ್ಷಾಬಂಧನ:
ಉತ್ತರ ಭಾರತದಲ್ಲಿ ರಕ್ಷಾಬಂಧನವನ್ನು ದೇವರನ್ನು ಪೂಜಿಸಿ ಸಹೋದರಿಯರು ಸಹೋದರರಿಗೆ ತಿಲಕವನ್ನಿಟ್ಟು ರಕ್ಷಾಬಂಧವನ್ನು ಕಟ್ಟಿ ಆರತಿ ಬೆಳಗಿಸಿ ಸಿಹಿಯನ್ನು ತಿನ್ನಿಸುವುದರ ಮೂಲಕ ಆಚರಿಸುತ್ತಾರೆ. ಪೂರ್ವ ಭಾರತದಲ್ಲಿ ’ಝೂಲಾ ಪೂರ್ಣಿಮೆ’ಯೆಂದು ದೇವತಾ ಶ್ರೀಕೃಷ್ಣ ಹಾಗೂ ರಾಧೆಗೆ ಪೂಜೆ ಸಲ್ಲಿಸಿ ರಕ್ಷಾಬಂಧನವನ್ನು ಕಟ್ಟಿ ಹಬ್ಬವನ್ನು ಆಚರಿಸುತ್ತಾರೆ. ಪಶ್ಚಿಮ ಭಾರತದಲ್ಲಿ ’ಪವಿತ್ರೋಪನ’ ಎಂದು ಪರಮಾತ್ಮ ಶಿವನಿಗೆ ಅಭಿಷೇಕ ಸಲ್ಲಿಸಿ ತಮ್ಮ ಹಿಂದಿನ ಪಾಪಕರ್ಮಗಳಿಗೆ ಕ್ಷಮೆಯನ್ನು ಕೇಳಿ ರಕ್ಷಾಬಂಧನವನ್ನು ಆಚರಿಸುತ್ತಾರೆ. ಮಧ್ಯಭಾರತದಲ್ಲಿ ’ಕಜಾರಿ ಪೂರ್ಣಿಮೆ’ಯೆಂದು ತಾಯಿ-ಮಕ್ಕಳೆಲ್ಲಾ ಸೇರಿ ಭೂಮಿ ತಾಯಿಯನ್ನು ಪೂಜಿಸಿ ಹಬ್ಬವನ್ನು ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ’ನಾರಾಲಿ ಪೂರ್ಣಿಮೆ’ಯಂದು ತೀರಪ್ರದೇಶದ ಜನರು ಸಾಗರಕ್ಕೆ ಕೊಬ್ಬರಿಯನ್ನು ಹಾಕಿ ಹಬ್ಬವನ್ನು ಆಚರಿಸುತ್ತಾರೆ. ತಮಿಳುನಾಡು ಮತ್ತು ಕೇರಳದಲ್ಲಿ ’ಅವನಿಅವಿಟ್ಟಂ ಪೂರ್ಣಿಮೆ’ಯಂದು ಪುರುಷರು ನೀರಿನಲ್ಲಿ ಮುಳುಗಿ ತಮ್ಮ ಪೂರ್ವ ಪಾಪಗಳಿಗೆ ಕ್ಷಮೆ ಕೇಳಿ ತಮ್ಮ ಜನಿವಾರವನ್ನು ಬದಲಿಸಿಕೊಳ್ಳುತ್ತಾ ಹಬ್ಬವನ್ನು ಆಚರಿಸುತ್ತಾರೆ. ಹೀಗೆ ರಕ್ಷಾಬಂಧನವನ್ನು ಭಾರತಾದ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ.
ರಕ್ಷಾಬಂಧನದ ಹಿನ್ನೆಲೆ:
ಕೇವಲ ಅಣ್ಣ-ತಂಗಿಯರ ಹಬ್ಬವೆಂದು ಆಚರಿಸಲ್ಪಡುವ ರಕ್ಷಾಬಂಧನ ಹಬ್ಬದ ಹಿನ್ನೆಲೆಯು ವಿಭಿನ್ನವಾಗಿದೆ. ಪುರಾಣದ ಅನುಸಾರ ರಾಕ್ಷಸರಿಗೂ ಹಾಗೂ ದೇವತೆಗಳಿಗೂ ಯುದ್ಧ ನಡೆಯುತ್ತಿತ್ತು. ಯುದ್ಧವು ನಿಲ್ಲುವ ಯಾವ ಸೂಚನೆಯು ಕಾಣುತ್ತಿರಲಿಲ್ಲ. ಆಗ ಇಂದ್ರನ ಪತ್ನಿಯಾದ ಸಚಿದೇವಿಯು ವಿಷ್ಣುವಿನ ಮೊರೆ ಹೋಗುತ್ತಾಳೆ. ವಿಷ್ಣುವು ಅವಳಿಗೆ ಪವಿತ್ರವಾದ ನೂಲುದಾರವನ್ನು ನೀಡುತ್ತಾನೆ. ಅದನ್ನು ಅವಳು ತನ್ನ ಪತಿಯ ಕೈಗೆ ಪರಮಾತ್ಮನ ರಕ್ಷಣೆ ಇರಲೆಂದು ಕಟ್ಟುತ್ತಾಳೆ. ಆಗ ಇಂದ್ರನು ಅಮರಾವತಿಯನ್ನು ಗೆಲ್ಲುತ್ತಾನೆ.
ಭಾಗವತದ ಪ್ರಕಾರ ಬಲಿ ಚಕ್ರವರ್ತಿಯು ಮೂರು ಲೋಕಗಳನ್ನು ಗೆದ್ದು, ವಿಷ್ಣುವನ್ನು ತನ್ನ ಅರಮನೆಯ ಹಿಂಭಾಗದಲ್ಲಿ ಬಂಧಿಯಾಗಿ ಇಟ್ಟುಕೊಂಡಿದ್ದನು. ಆಗ ಶ್ರೀ ಲಕ್ಷ್ಮಿಯು ತನ್ನ ಪತಿಯನ್ನು ಬಂಧನದಿಂದ ಬಿಡಿಸಲು ಬಲಿ ಚಕ್ರವರ್ತಿಗೆ ರಕ್ಷಾಬಂಧನವನ್ನು ಕಟ್ಟುತ್ತಾಳೆ. ಬಲಿ ಚಕ್ರವರ್ತಿಯು ಉಡುಗೊರೆಯಾಗಿ ವಿಷ್ಣುವನ್ನು ಬಂಧನದಿಂದ ಮುಕ್ತಗೊಳಿಸುತ್ತಾನೆ. ಈ ರೀತಿ ಶ್ರೀ ಲಕ್ಷ್ಮಿಯು ಪವಿತ್ರ ಬಂಧನದ ಮೂಲಕ ತನ್ನ ಪತಿಯನ್ನು ವೈಕುಂಠಕ್ಕೆ ಕರೆದೊಯ್ಯುತ್ತಾಳೆ.
ಗಣೇಶನ ಇಬ್ಬರು ಪುತ್ರರಾದ ಶುಭ-ಲಾಭರು ತಂಗಿಯರು ಬೇಕೆಂಬ ಬೇಡಿಕೆಯನ್ನು ತಮ್ಮ ತಂದೆಯ ಬಳಿ ಇಡುತ್ತಾರೆ. ಆಗ ಗಣೇಶನು ನಾರದರ ಸಹಾಯದಿಂದ ದಿವ್ಯಜ್ಯೊತಿಯನ್ನು ಸೃಷ್ಟಿಸಿ ಸಂತೋಷಿ ಮಾತಾಳಿಂದ ಇಬ್ಬರು ಹೆಣ್ಣುಮಕ್ಕಳನ್ನು ಪಡೆಯುತ್ತಾನೆ. ಈ ಪುತ್ರಿಯರನ್ನು ಪಡೆದ ದಿನವೇ ರಕ್ಷಾಬಂಧನದ ದಿನವೆಂದು ಹೇಳಲಾಗುತ್ತದೆ.
ಮಹಾಭಾರತದಲ್ಲಿ ಪಾಂಡವರ ಪತ್ನಿಯಾದ ದ್ರೌಪದಿಯು ಶ್ರೀಕೃಷ್ಣನಿಗೆ ರಕ್ಷಾಬಂಧನವನ್ನು ಕಟ್ಟಿ ವಸ್ತ್ರಾಪಹರಣದ ಸಂದರ್ಭದಲ್ಲಿ ರಕ್ಷಣೆಯನ್ನು ಪಡೆದ ಉದಾಹರಣೆಯನ್ನು ಕಾಣಬಹುದು. ಕುಂತಿಯು ಅಭಿಮನ್ಯುವು ಯುದ್ಧಕ್ಕೆ ಹೊರಟು ನಿಂತಾಗ ರಕ್ಷಾಬಂಧನವನ್ನು ಕಟ್ಟಿದ ಉದಾಹರಣೆಯನ್ನು ಸ್ಮರಿಸಬಹುದು. ಹೀಗೆ ರಕ್ಷಾಬಂಧನವು ಕೇವಲ ಅಣ್ಣ-ತಂಗಿಯರ ಹಬ್ಬವಾಗಿರದೇ ಸರ್ವರೂ ಪರಮಾತ್ಮನ ರಕ್ಷಣೆಯನ್ನು ಪಡೆಯುವ ಹಬ್ಬವಾಗಿದೆ.
ರಕ್ಷಣೆಗಾಗಿ ರಕ್ಷಾಬಂಧನ:
ವರ್ತಮಾನ ಪರಿಸ್ಥಿತಿಯಲ್ಲಿ ಭಾರತೀಯ ಸಮಾಜದಲ್ಲಿ ನಡೆಯುತ್ತಿರುವ ಅನೇಕ ಅಹಿತಕರ ಘಟನೆಗಳನ್ನು ನೋಡಿದಾಗ ರಕ್ಷಾಬಂಧನದ ಹಬ್ಬವನ್ನು ವಿಶೇಷವಾಗಿ ಆಚರಿಸುವುದು ಮಹತ್ವಪೂರ್ಣವಾಗಿದೆ. ಸ್ತ್ರೀ-ರಕ್ಷಣೆಯ ವಿಷಯವನ್ನು ತೆಗೆದುಕೊಂಡರೆ ಸ್ತ್ರೀಯನ್ನು ದೇವಿಯಂದು ಪೂಜಿಸುವ ನಾಡಿನಲ್ಲಿಂದು ಅತ್ಯಾಚಾರಗಳು ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಮಾನವನು ವೈಜ್ಞಾನಿಕವಾಗಿ ಎಷ್ಟೇ ಮುಂದೆವರೆದಿದ್ದರೂ ಆಧ್ಯಾತ್ಮಿಕವಾಗಿ ಮತ್ತು ನೈತಿಕವಾಗಿ ಹಿಂದೆ ಉಳಿದಿದ್ದಾನೆ. ಸಾಮಾಜಿಕ ಬಂಧನಗಳನ್ನು ಮುರಿದು ಮಾನವನು ಶ್ರೇಷ್ಠ ಗುಣಗಳಿಂದ ದೂರನಾಗಿ ದಾನವ-ಲಕ್ಷಣಗಳಿಂದ ಕೂಡಿಹೋಗಿದ್ದಾನೆ. ಈ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತೊಮ್ಮೆ ತರಲು ಮನುಷ್ಯಾತ್ಮರು ರಕ್ಷಾಬಂಧನದ ಮಹತ್ವ ಅರಿತುಕೊಳ್ಳುವುದು ಅವಶ್ಯಕವಾಗಿದೆ.
ಮಾನವೀಯ ಮೌಲ್ಯಗಳು, ದೈವಿ ಗುಣಗಳು ಮಾನವನ ಸುಖ-ಶಾಂತಿಮಯ ಜೀವನಕ್ಕೆ ಆಧಾರವಾಗಿವೆ. ಆದರೆ ಇಂದಿನ ಮಾನವ ಅವುಗಳನ್ನು ಕಡೆಗಣಿಸಿ ಸ್ವಚ್ಛಂಧತೆಯ ದಾರಿ ಹಿಡಿದು ದು:ಖಿಯಾಗಿದ್ದಾನೆ. ನೈತಿಕ-ನಿಯಮಗಳ ಬಂಧನದೊಳಗಿದ್ದಾಗ ಪರಮಾತ್ಮನ ರಕ್ಷಣೆಯು ತನ್ನತಾನೇ ಮಾನವನಿಗೆ ದೊರೆಯುತ್ತದೆ. ಆದ್ದರಿಂದಲೇ ಧರ್ಮೋ ರಕ್ಷತಿ ರಕ್ಷಿತಾ: ಎಂದು ಹೇಳಲಾಗುತ್ತದೆ. ಧರ್ಮದ ಅರ್ಥವಾಗಿದೆ ’ದೈವಿಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು.’
ಇಂದು ಎಲ್ಲಾ ಸಂಬಂಧಗಳು ಇದ್ದರೂ ದು:ಖ-ಕಷ್ಟಗಳು ಬಂದಾಗ ರಕ್ಷಣೆಗಾಗಿ ಪರಮಾತ್ಮನ ಮೊರೆ ಹೋಗುತ್ತೇವೆ. ನಮಗೆಲ್ಲರಿಗೂ ದೈವಿ ರಕ್ಷಣೆಯು ಅವಶ್ಯವಾಗಿ ಬೇಕಾಗಿದೆ. ರಕ್ಷಣೆ ಮತ್ತು ಬಂಧನ ಈ ಎರಡು ಶಬ್ದಗಳನ್ನು ನೋಡಿದಾಗ ರಕ್ಷಣೆಯನ್ನು ಎಲ್ಲರೂ ಬಯಸುತ್ತೇವೆ. ಆದರೆ ಬಂಧನವನ್ನು ಯಾರೂ ಬಯಸುವುದಿಲ್ಲ. ಬಂಧನವೆಂದರೆ ’ಸಾಮಾಜಿಕ, ಆಧ್ಯಾತ್ಮಿಕ ಮತ್ತು ನೈತಿಕ ನೀತಿ-ನಿಯಮಗಳಿಂದ ನಮ್ಮ ಮನಸ್ಸನ್ನು ಬಂಧಿಸಿಕೊಳ್ಳುವುದಾಗಿದೆ.’ ಉದಾಹರಣೆಗೆ ಸುಂದರ ಅಚ್ಚಿನಿಂದ ನಿರ್ಮಿಸಿದ ಮೂರ್ತಿಯು ನಿರ್ದಿಷ್ಟ ರೂಪವನ್ನು ತಾಳುವಂತೆ ಶ್ರೇಷ್ಠ ಗುಣಗಳ ಬಂಧನ/ಅಚ್ಚಿನಿಂದ ವ್ಯಕ್ತಿಯು ದೇವಮಾನವನಾಗುತ್ತಾನೆ. ಗಾಳಿಪಟಕ್ಕೆ ಸೂತ್ರವನ್ನು ಕಟ್ಟಿದಾಗ ಮಾತ್ರ ಅದು ಎತ್ತರೆತ್ತರಕ್ಕೆ ಹಾರಲು ಸಾಧ್ಯವಾಗುತ್ತದೆ. ಸೂತ್ರವೆಂದರೆ ನಿಯಮ ಅಥವಾ ಬಂಧನವಾಗಿದೆ. ಮಾನವನನ್ನು ಮಹಾಮಾನವನನ್ನಾಗಿ ಮಾಡಲು ಈ ಬಂಧನಗಳೆಂಬ ನೀತಿ-ನಿಯಮಗಳು ಬೇಕೇ ಬೇಕು. ಮರ್ಯಾದೆಗಳನ್ನು ಅನುಸರಿಸಿದಾಗ ಮಾತ್ರ ಮರ್ಯಾದಾ ಪುರುಷೋತ್ತಮರಾಗಲು ಸಾಧ್ಯ.
ರಕ್ಷಾಬಂಧನದ ಆಧ್ಯಾತ್ಮಿಕ ಅರ್ಥ:
ರಕ್ಷಾಬಂಧನದ ಸಮಯದಲ್ಲಿ ಸಹೋದರಿಯರು ತಮ್ಮ ಸಹೋದರನ ಮಸ್ತಕದ ಮೇಲೆ ತಿಲಕವನ್ನಿಟ್ಟು, ಆರತಿಯನ್ನು ಬೆಳಗಿಸಿ, ಸಿಹಿಯನ್ನು ತಿನ್ನಿಸಿ, ಶುಭಕೋರುತ್ತಾ ರಕ್ಷಾಬಂಧನವನ್ನು ಕಟ್ಟುತ್ತಾರೆ. ತಿಲಕವು ಆತ್ಮಜ್ಯೋತಿಯ ಪ್ರತೀಕವಾಗಿದೆ. ಇದು ದೇಹದೃಷ್ಟಿಯಿಂದ ದೂರವಿದ್ದು, ಆತ್ಮಿಕ ದೃಷ್ಟಿಯನ್ನು ಹೊಂದುವುದರ ಸಂಕೇತವಾಗಿದೆ. ಪರಮಾತ್ಮನ ಸ್ಮರಣೆಯನ್ನು ಮಾಡಿ ಅವನ ರಕ್ಷಣೆಯು ಸದಾ ಸಹೋದರನಿಗೆ ಇರಲೆಂದು ಸಹೋದರಿಯು ರಕ್ಷಾಬಂಧನವನ್ನು ಕಟ್ಟುತ್ತಾಳೆ. ಸಹೋದರನ ಸಕಲ ಶ್ರೇಯೋಭಿವೃದ್ಧಿಗಾಗಿ ಶುಭವನ್ನು ಹಾರೈಸುತ್ತಾಳೆ. ಈ ಸಂದರ್ಭದಲ್ಲಿ ಸಹೋದರನು ಸಹೋದರಿಯ ರಕ್ಷಣೆಗಾಗಿ ದೃಢಸಂಕಲ್ಪ ಮಾಡುತ್ತಾನೆ. ವಾಸ್ತವಿಕವಾಗಿ ನಾವೆಲ್ಲರೂ ದೃಢತೆಯಿಂದ ನಮ್ಮಲ್ಲಿರುವ ದುರ್ಗುಣ, ದುಶ್ಚಟ, ದುರ್ಬಲತೆಗಳನ್ನು ಕಾಣಿಕೆಯಾಗಿ ಆ ಪರಮಾತ್ಮನಿಗೆ ನೀಡಬೇಕು. ಆರತಿಯು ಜ್ಞಾನಪ್ರಕಾಶದ ಪ್ರತೀಕವಾಗಿದೆ. ನಮ್ಮ ವೇದಗಳು ಸಾರುವಂತೆ ನಹಿ ಜ್ಞಾನೇನ ಸದೃಶಂ, ಅರ್ಥಾತ್ ಜ್ಞಾನಕ್ಕಿಂತ ಮಿಗಿಲಾದದ್ದೂ ಯಾವುದೂ ಇಲ್ಲ. ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಸಾಗುವುದೇ ಆರತಿ ಬೆಳಗುವುದಾಗಿದೆ. ಬಾಯಿ ಸಿಹಿಮಾಡುವುದೆಂದರೆ ಸದಾ ಶುಭ ಹಾಗೂ ಮಧುರ ನುಡಿಗಳನ್ನು ನುಡಿಯುವುದಾಗಿದೆ. ಸ್ನೇಹ-ಪ್ರೀತಿಯಿಂದ ಸಹಬಾಳ್ವೆಯನ್ನು ನಡೆಸುವುದರ ಸಂಕೇತವಾಗಿದೆ.
ಹೀಗೆ ಜ್ಞಾನಪೂರ್ಣವಾಗಿ, ಅರ್ಥಗರ್ಭಿತವಾಗಿ ರಕ್ಷಾಬಂಧನದ ಹಬ್ಬವನ್ನು ಆಚರಿಸಿದಾಗ ಮನೆ, ಮನಗಳೆರಡೂ ಸುಂದರವಾಗುತ್ತವೆ. ಕೇವಲ ಸ್ಥೂಲ ಆಚರಣೆಯಿಂದ ಯಾವುದೇ ಪ್ರಾಪ್ತಿಯಾಗುವುದಿಲ್ಲ. ವಿಶ್ವಕ್ಕೆಲ್ಲಾ ವಿಶ್ವಬಂಧುತ್ವವನ್ನು ಸಾರುವಂತಹ ನಾವು ಭಾರತೀಯರು ಶ್ರೇಷ್ಠ ವಿಚಾರವಂತರಾಗಿ ವಿಶ್ವಬಂಧುತ್ವದ ಈ ಹಬ್ಬವನ್ನು ಆಚರಿಸೋಣ.
ಲೇಖಕರು: ಶ್ರೀಮತಿ ಉಮಾದೇವಿ ಎ.ಸಿ. ಉಪನ್ಯಾಸಕರು, ಡಾ. ತಿಮ್ಮಾರೆಡ್ಡಿ ಫೌಂಡೇಶನ್ ಪದವಿ ಪೂರ್ವ ಕಾಲೇಜು, ದಾವಣಗೆರೆ.
ಕೃಪೆ: ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ದಾವಣಗೆರೆ.
Click this button or press Ctrl+G to toggle between Kannada and English