ಬೆಂಗಳೂರು: ಬಿಬಿಎಂಪಿ ವಿರುದ್ಧ ಬೃಹತ್ ಹಗರಣದ ಆರೋಪ ಕೇಳಿ ಬಂದಿದ್ದು, ಆರ್ಟಿಐ ಕಾರ್ಯಕರ್ತ ಡಿ.ವಿ ಚಕ್ರವರ್ತಿ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎಸ್ ನಟರಾಜ್ ಶರ್ಮಾ ಈ ಆರೋಪ ಮಾಡಿದ್ದಾರೆ.
150 ಕೋಟಿ ರೂ. ಭ್ರಷ್ಟಾಚಾರ ಆರೋಪ ನಡೆದಿದೆ ಎಂದು ಆರೋಪಿಸಿರುವ ಇವರು, 2017 ರಲ್ಲಿ ನಗರದಲ್ಲಿ ಎಲ್ಇಡಿ ಬಲ್ಬ್ ಅಳವಡಿಸಲು ಯೋಜನೆ ರೂಪಿಸಿತ್ತು. ಈ ಯೋಜನೆಗೆ ಸಲಹಾ ಸಂಸ್ಥೆಯನ್ನು ನೇಮಿಸುವಾಗ ಇರಬೇಕಾದ ನೀತಿ ನಿಂಬಂಧನೆಗಳನ್ನು ಗಾಳಿಗೆ ತೂರಿರುವ ಪಾಲಿಕೆ, ಇಂಟರ್ ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಎಂಬ ಸಂಸ್ಥೆ ನೇಮಕ ಮಾಡಿ ವಂಚಿಸಿದೆ ಎಂದು ದೂರಿದ್ದಾರೆ.
ನಿರ್ದಿಷ್ಟ ಕಂಪನಿಗೆ ಟೆಂಡರ್ ನೀಡುವ ಸಲುವಾಗಿ ನೀತಿ ನಿಯಾಮಾವಳಿಗಳನ್ನು ತನ್ನಿಷ್ಟದಂತೆ ರೂಪಿಸಿಕೊಂಡ ಸಲಹಾ ಸಂಸ್ಥೆ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ಸಲಹಾ ಸಂಸ್ಥೆ ಇತರೇ ರಾಜಸ್ಥಾನ, ಒಡಿಶಾ ಮುಂತಾದ ರಾಜ್ಯಗಳಲ್ಲಿಯೂ ಕೆಲಸ ನಿರ್ವಹಿಸಿದ್ದು, ಬೆಂಗಳೂರಿನಲ್ಲಿ ಮಾತ್ರ ಟೆಂಡರ್ ಪಡೆಯಲು ಯೋಜನಾ ಅನುಭವವನ್ನು ತನ್ನಿಚ್ಚೆಯಂತೆ ನಿಗದಿಸಿರೋ ಆರೋಪ ಕೇಳಿ ಬಂದಿದೆ.
ಶಾಪೂರ್ಜಿ ಪಾಲ್ಲೊಂಜಿ ಕಂಪನಿಗೆ ಅನುಕೂಲ ಮಾಡಿಕೊಡೋ ನಿಟ್ಟಿನಲ್ಲಿ ಗೋಲ್ ಮಾಲ್ ನಡೆದಿದೆ ಎನ್ನಲಾಗಿದ್ದು, ಈ ವಿಚಾರವನ್ನು ಈ ಹಿಂದೆಯೇ ಬಿಬಿಎಂಪಿ ಆಯುಕ್ತರ ಗಮನಕ್ಕೆ ಆರ್ಟಿಐ ಕಾರ್ಯಕರ್ತ ಡಿ.ವಿ. ಚಕ್ರವರ್ತಿ ತಂದಿದ್ದರು ಎನ್ನಲಾಗಿದೆ.
ಅಲ್ಲದೆ ಆರ್ ಟಿ ಐ ಮೂಲಕ ಅರ್ಜಿ ಸಲ್ಲಿಸಿದರೂ ಸರಿಯಾದ ಪ್ರತ್ಯುತ್ತರವನ್ನು ಬಿಬಿಎಂಪಿ ನೀಡಿಲ್ಲ ಎನ್ನಲಾಗಿದೆ. ಈಗಾಗಲೇ 150 ಕೋಟಿ ಅವ್ಯವಹಾರವಾಗಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಎರಡು ಸಾವಿರ ಕೋಟಿಗೂ ಮೀರಿದ ಯೋಜನೆಯಾಗಿದ್ದು, ಇನ್ನಷ್ಟು ಭ್ರಷ್ಟಾಚಾರ ನಡೆಯಲಿದೆ ಎಂದು ಆರೋಪಿಸಿದ್ದಾರೆ.
Click this button or press Ctrl+G to toggle between Kannada and English