ಬೆಂಗಳೂರು: ಮಾತುಕತೆ ಭಾರತ ಮತ್ತು ಪಾಕಿಸ್ತಾನ ಮಧ್ಯೆಯೂ ನಡೆಯುತ್ತದೆ. ಅಂತಹದ್ದರಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಬಾರದಾ? ಎಂದು ಶಾಸಕ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶಾಸಕ ಶ್ರೀರಾಮುಲು ಅವರು ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಯಿಸಿದರು. ಸರ್ಕಾರವನ್ನು ನಾವು ಬೀಳಿಸುವ ಪ್ರಯತ್ನ ಮಾಡುವುದಿಲ್ಲ. ಅವಕಾಶ ಬಂದಾಗ ಕಣ್ಮುಚ್ಚಿ ಕುಳಿತುಕೊಳ್ಳುವ ಮೂರ್ಖರು ನಾವಲ್ಲ. ಸರ್ಕಾರವೇ ತನ್ನ ಆಂತರಿಕ ಕಿತ್ತಾಟದಿಂದ ಪತನವಾಗುತ್ತದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬರಲಿ ಅನ್ನೋದು ರಾಜ್ಯದ ಜನರ ಅಪೇಕ್ಷೆ. ಅದಕ್ಕೆ ಕಾಂಗ್ರೆಸ್ 78 ಸ್ಥಾನಕ್ಕೆ ಇಳಿದಿದೆ. ರಾಜಕಾರಣ ನಿಂತ ನೀರಲ್ಲ. ಸಿದ್ದರಾಮಯ್ಯ ಮನಸ್ಥಿತಿ ಸರಿ ಇಲ್ಲದಿದ್ದರೆ ಏನು ಮಾಡಬೇಕು ಅಂತ ಮೇಲ್ಪಂಕ್ತಿ ಹಾಕಿದ್ದಾರೆ. 2005 ಕ್ಕಿಂತ ಮೊದಲು ಸಿದ್ದರಾಮಯ್ಯ ಏನು ಮಾಡಿದ್ದಾರೆ ಅಂತ ನೋಡಿ. ಪರಿಸ್ಥಿತಿ ಕೈಕೊಟ್ಟರೆ ನಾವೂ ಸಹ ಸಿದ್ದರಾಮಯ್ಯರ ಥರ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನಾವು ಸರ್ಕಾರ ಬೀಳಿಸಲು ಹೋಗುವುದಿಲ್ಲ. ಆದರೆ, ಈ ಸರ್ಕಾರ ಅದಾಗಿಯೇ ಬಿದ್ದರೆ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತೇವೆ ಎಂದು
ರಮೇಶ್ ಜಾರಕಿಹೊಳಿಯವರನ್ನ ಬಿಜೆಪಿಗೆ ಸೆಳೆಯುತ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಿ.ಟಿ. ರವಿ, ಯಾರನ್ನೇ ಆಗಲಿ ಸೈದ್ಧಾಂತಿಕ ನೆಲೆಯಲ್ಲೇ ಬಿಜೆಪಿಗೆ ತರುತ್ತೇವೆ. ಕಾಂಗ್ರೆಸ್ನಲ್ಲಿನ ಅಸಮಾಧಾನ ಶಮನ ಮಾಡಲು ಹೈಕಮಾಂಡ್ ಏಳು ಕೆರೆ ನೀರು ಕುಡಿಯುತ್ತಿದೆ. ಹೀಗಿರುವಾಗ ಅವರು ಏನು ಮಾಡಲು ಸಾಧ್ಯ? ಕಾಂಗ್ರೆಸ್ ನಾಯಕರು ಅವರಿಗೇನು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸಚಿವ ಡಿ.ಕೆ. ಶಿವಕುಮಾರ್ ಅಕ್ರಮ ಮಾಡದಿದ್ದರೆ ಭಯ ಏಕೆ ಎಂದು ಪ್ರಶ್ನಿಸಿದ ಸಿ.ಟಿ.ರವಿ, ಅಕ್ರಮ ಮಾಡಿಲ್ಲವೆಂದರೆ ಚಿನ್ನದ ಗಟ್ಟಿ ತರ ಹೊರ ಬರುತ್ತಾರೆ. ಪಾರದರ್ಶಕ ವ್ಯವಹಾರ ಮಾಡಿರುವವರು ಭಯ ಪಡುವುದಿಲ್ಲ. ಭಾರಿ ಅಕ್ರಮ ಮಾಡಿರುವುದಕ್ಕೆ ಅವರು ಭಯ ಪಡುತ್ತಿದ್ದಾರೆ ಅನ್ಸುತ್ತೆ. ಕಾಂಗ್ರೆಸ್ -ಜೆಡಿಎಸ್ ನಾಯಕರು ಯಾಕೆ ಡಿಕೆಶಿ ಪರ ಇಷ್ಟು ಬ್ಯಾಟಿಂಗ್ ಮಾಡುತ್ತಿದ್ದಾರೆ ಅಂತ ಗೊತ್ತಿಲ್ಲ ಎಂದರು.
ಚಿಕ್ಕಮಗಳೂರಿನ ದತ್ತ ಪೀಠ ವಿವಾದದ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಬಾಬಾ ಬುಡನ್ಗಿರಿಯಲ್ಲಿ ಮುಜಾವರ್ ಮಾತ್ರ ನೇಮಕ ಸಂಬಂಧ ಸರ್ಕಾರ ಅಡ್ವೋಕೇಟ್ ಜನರಲ್ ಸಲಹೆ ಪಡೆಯಲಿ. ದರ್ಗಾ, ಮಸೀದಿಗಳಲ್ಲಿ ಮುಜಾವರ್ ರೀತಿಯೇ ಹಿಂದೂ ಅರ್ಚಕರ ನೇಮಕ ಮಾಡಲಿ ಎಂದು ಆಗ್ರಹಿಸಿದರು.
ಸರ್ಕಾರ ಹೈಕೋರ್ಟ್ಗೆ ಈ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು. ಸರ್ಕಾರಕ್ಕೆ ವಿವಾದ ಜೀವಂತ ಇಡಬೇಕೆಂಬಾಸೆ. ಹಾಗಾಗಿ ಸರ್ಕಾರ ಹಿಂದೂ ಅರ್ಚಕರ ನೇಮಕ ಮಾಡುತ್ತಿಲ್ಲ. ಅರ್ಚಕರನ್ನು ನೇಮಿಸಿದರೆ ವಿವಾದ ಬಗೆಹರಿಯಲಿದೆ ಎಂದು ತಿಳಿಸಿದರು. ಬಿಜೆಪಿ ಸರ್ಕಾರ ಬಂದ್ರೆ ದತ್ತಾತ್ರೇಯ ಪೀಠಕ್ಕೆ ಅರ್ಚಕರ ನೇಮಕ ಮಾಡುತ್ತೇವೆ. ಹಾಗೇ ದರ್ಗಾಕ್ಕೆ ಮುಜಾವರ್ ನೇಮಕ ಮಾಡುತ್ತೇವೆ ಎಂದು ಸಿ ಟಿ ರವಿ ಹೇಳಿದರು.
Click this button or press Ctrl+G to toggle between Kannada and English