ಲೋಕಕಲ್ಯಾಣಕ್ಕಾಗಿ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಗೆ ಮಹಾಮಜ್ಜನ ನಡೆಸಲಾಗುವುದು: ಡಾ. ಡಿ. ವೀರೇಂದ್ರ ಹೆಗ್ಗಡೆ

9:55 AM, Wednesday, September 12th, 2018
Share
1 Star2 Stars3 Stars4 Stars5 Stars
(No Ratings Yet)
Loading...

veerendra-hegadeಬೆಳ್ತಂಗಡಿ: ಲೋಕಕಲ್ಯಾಣಾರ್ಥವಾಗಿ 2019ರ ಫೆಬ್ರುವರಿಯಲ್ಲಿ ಧರ್ಮಸ್ಥಳದಲ್ಲಿರುವ ಭಗವಾನ್ ಬಾಹುಬಲಿಗೆ ಮಹಾಮಜ್ಜನ ನಡೆಸಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 1982ರಲ್ಲಿ ಪ್ರತಿಷ್ಠಾಪನೆಗೊಂಡ 48 ಅಡಿ ಎತ್ತರದ ಬಾಹುಬಲಿಗೆ ಮೊದಲ ಮಸ್ತಕಾಭಿಷೇಕ ನಡೆಸಲಾಗಿತ್ತು. ಬಳಿಕ 1994, 2007ರಲ್ಲಿ ಮಸ್ತಕಾಭಿಷೇಕ ಕೈಗೊಳ್ಳಲಾಗಿತ್ತು. ಇದೀಗ 2019ರಲ್ಲಿ 4ನೇ ಬಾರಿಗೆ ಮಹಾಭಿಷೇಕವನ್ನು ವರ್ಧಮಾನ ಸಾಗರಜೀ ಮಹಾರಾಜ್, ಪುಷ್ಪದಂತ ಸಾಗರ್‍ಜೀ ಮಹಾರಾಜ್ ಮತ್ತು ಹದಿನೈದು ಮಂದಿ ದಿಗಂಬರ ಮುನಿಗಳ ನೇತೃತ್ವದಲ್ಲಿ ನೆರವೇರಿಸಲಾಗುವುದು. ಜೀನೇ ಔರ್ ಜೀನೇ ದೋ (ಬದುಕು ಮತ್ತು ಬದುಕಲು ಬಿಡು) ಎಂಬ ಧ್ಯೆಯ ವಾಕ್ಯದಡಿ ಲೋಕ ಕಲ್ಯಾಣಾರ್ಥವಾಗಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸುಮಾರು 8 ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟೇ ದಿನಾಂಕ ನಿರ್ಧಾರವಾಗಬೇಕಾಗಿದೆ ಎಂದ ಧರ್ಮಾಧಿಕಾರಿ ಈ ಬಾರಿಯ ಮಸ್ತಕಾಭಿಷೇಕದ ಸಂದರ್ಭದ ನೆನಪಿಗಾಗಿ ಜನಕಲ್ಯಾಣ ಕಾರ್ಯಕ್ರಮದ ಅಂಗವಾಗಿ ರಾಜ್ಯದ 200 ಕೆರೆಗಳ ಹೂಳೆತ್ತಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಮಹಾಮಸ್ತಕಾಭಿಷೇಕ ನಡೆಯುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಲಾಗಿದ್ದು, ಸರ್ಕಾರದ ಎಲ್ಲಾ ಇಲಾಖೆಯು ನೆರವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಜನಸಂದಣಿ ಹೆಚ್ಚಾಗುತ್ತಿರುವುದರಿಂದ ರಿಂಗ್ ರೋಡ್ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರ ಬಳಿ ಚರ್ಚಿಸಲಾಗಿದ್ದು, ಈ ಬಗ್ಗೆ ಶೀಘ್ರವಾಗಿ ಕಾರ್ಯಾನುಷ್ಠಗೊಳಿಸುವ ಭರವಸೆ ನೀಡಿದ್ದಾರೆ ಎಂದರು.
ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಸೋಮವಾರ ಕ್ಷೇತ್ರದಲ್ಲಿ ರಾಜ್ಯದ ಶ್ರಾವಕ-ಶ್ರಾವಕಿಯರ ಮೊದಲ ಸಮಾಲೋಚನಾ ಸಭೆ ನಡೆಸಲಾಗಿದ್ದು, ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡಬಿದರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ಸುರೇಂದ್ರ ಕುಮಾರ್ ಅವರು ಪ್ರಧಾನ ಸಂಚಾಲಕರಾಗಿದ್ದು, ಹರ್ಷೇಂದ್ರ ಕುಮಾರ್ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಹಾವೀರ ಅಜ್ರಿ ಹಾಗೂ ವೀರೂ ಶೆಟ್ಟಿ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ ವೀರೇಂದ್ರ ಹೆಗ್ಗಡೆ ವಿವರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English