ಮಂಗಳೂರು : ರಾಷ್ಟ್ರ ಮಟ್ಟದ ಯುವಜನೋತ್ಸವದ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಬುಧವಾರ ಇಲ್ಲಿನ ಸರ್ಕೀಟ್ ಹೌಸ್‌ನಲ್ಲಿ ಪತ್ರಕರ್ತರಿಗೆ ಯುವಜನೋತ್ಸವದ ವಿವರಣೆ ನೀಡಿದರು.
ಯುವಜನೋತ್ಸವಕ್ಕೆ ರಾಜ್ಯ ಸರಕಾರದದಿಂದ 10 ಕೋಟಿ ರೂ. ಮತ್ತು ಕೇಂದ್ರ ಸರಕಾರದ 2 ಕೋಟಿ ರೂ. ಸಹಿತ ಒಟ್ಟು 12 ಕೋಟಿ ರೂ. ಬಿಡುಗಡೆಯಾಗಿದೆ, ರಾಷ್ಟ್ರ ಮಟ್ಟದ ಯುವಜನೋತ್ಸವವನ್ನು ಕರ್ನಾಟಕದಲ್ಲಿ ಪ್ರಥಮ ಬಾರಿ ನಡೆಸಲಾಗುತ್ತಿದೆ, ಮಂಗಳೂರಿನಲ್ಲಿ ಈ ತಿಂಗಳ 12ರಿಂದ 16ರ ವರೆಗೆ ನಡೆಯಲಿರುವ ಈ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಲು ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದರು.
ಯುವಜನೋತ್ಸವ ವಿವೇಕಾನಂದರ ಜಯಂತಿಯಂದು ಉದ್ಘಾಟನೆಗೊಳ್ಳಲಿರುವ ಕಾರಣ ಇದಕ್ಕೆ ಹೆಚ್ಚಿನ ಮಹತ್ವವಿದೆ. ಯುವಜನರು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳ ಬೇಕೆನ್ನುವುದು ಯುವಜನೋತ್ಸವದ ಮೂಲ ಉದ್ದೇಶ ಎಂದು ಗೌಡ ಹೇಳಿದರು.
ಈ ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 6,000 ಪ್ರತಿನಿಧಿಗಳು ಭಾಗವಹಿಸಲಿದ್ದು, ಭಾಗವಹಿಸುವವರಿಗೆ ಮತ್ತು ಪಾಲ್ಗೊಳ್ಳುವ ಪ್ರತಿನಿಧಿಗಳಿಗೆ ಈ ಸಕಲ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಲಾಗಿದೆ ಎಂದರು.
ಉತ್ಸವದ ದಿನಗಳಲ್ಲಿ ಅಗತ್ಯ ಬಿದ್ದರೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಂಗಳೂರು ನಗರದ ಸೌಂದರ್ಯವನ್ನು ಹೆಚ್ಚಿಸಲು ಅಗತ್ಯ ಕ್ರಮ ಜರಗಿಸಲು ಆದೇಶಿಸಲಾಗಿದೆ. ಅಲ್ಲದೆ ಪಾಲಿಕೆ ವ್ಯಾಪ್ತಿಯ ರಸ್ತೆ ಮತ್ತು ಚರಂಡಿಗಳ ದುರಸ್ತಿ, ಇಂಟರ್‌ಲಾಕ್ ಜೋಡಣೆ ಇತ್ಯಾದಿ ಕಾಮಗಾರಿಗಳನ್ನು ಕೂಡಲೇ ನಿರ್ವಹಿಸಿ ಪೂರ್ತಿಗೊಳಿಸುವಂತೆ ಮೇಯರ್ ಮತ್ತು ಪಾಲಿಕೆ ಅಯುಕ್ತರಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಮಳೆಯಿಂದಾಗಿ ಸ್ವಲ್ಪ ವಿಳಂಬವಾಗಿದೆ. ಇದೇ ಜ. 15ರೊಳಗೆ ಎಲ್ಲಾ ರಸ್ತೆಗಳ ಹೊಂಡಗಳನ್ನು ಮುಚ್ಚಿ ದುರಸ್ತಿಗೊಳಿಸುವ ಕಾಮಗಾರಿ ಪೂರ್ತಿಗೊಳ್ಳಲಿದೆ ಎಂದು ಡಿ.ವಿ. ಸದಾನಂದ ಗೌಡ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ವಿಧಾನ ಸಭೆಯ ಉಪ ಸಭಾಧ್ಯಕ್ಷ ಎನ್. ಯೋಗೀಶ್ ಭಟ್, ಮೇಯರ್ ಪ್ರವೀಣ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ವಿ.ಎಸ್. ಆಚಾರ್ಯ, ಶಾಸಕರಾದ ಎಸ್. ಅಂಗಾರ, ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಯು.ಟಿ. ಖಾದರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಎನ್.ಎಸ್. ಚನ್ನಪ್ಪ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್. ವಿಜಯ ಪ್ರಕಾಶ್, ಪಾಲಿಕೆಯ ಅಯುಕ್ತ ಡಾ| ಹರೀಶ್ ಕುಮಾರ್, ಮುಡಾ ಅಯುಕ್ತ ಅಜಿತ್ ಕುಮಾರ್ ಹೆಗ್ಡೆ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English