ಅಭಿವೃದ್ಧಿಯ ಜೊತೆಗೆ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವುದು ಸಂಸ್ಥೆಗಳ ಹೊಣೆ: ಯು.ಟಿ. ಖಾದರ್

10:17 AM, Saturday, September 15th, 2018
Share
1 Star2 Stars3 Stars4 Stars5 Stars
(No Ratings Yet)
Loading...

u-t-khaderಮಂಗಳೂರು: ಜಿಲ್ಲಾಡಳಿತ ಮತ್ತು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಕೆಂಜಾರಿನಲ್ಲಿ ಶಾಶ್ವತ ಚರಂಡಿ ನಿರ್ಮಾಣಕ್ಕೆ 6 ಕೋಟಿ 75 ಲಕ್ಷ ರೂ.ಗಳನ್ನು ಸಿಎಸ್‍ಆರ್ ನಿಧಿಯಿಂದ ನೀಡಿದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಲೋಕಸಭಾ ಸದಸ್ಯರ ಉಪಸ್ಥಿತಿಯಲ್ಲಿ ಪರಸ್ಪರ ಒಡಂಬಡಿಕೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದು, ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಮಾತನಾಡಿ, ಅಭಿವೃದ್ಧಿಯ ಜೊತೆಗೆ ಅಭಿವೃದ್ಧಿಗೆ ಪೂರಕ ನೆರವು ನೀಡುವ ಜನ ಸಾಮಾನ್ಯರಿಗೆ ಪರಿಹಾರ ನೀಡುವುದಲ್ಲದೆ ಅವರ ಸಮಸ್ಯೆಗೆ ಸ್ಪಂದಿಸುವುದು ಸಂಸ್ಥೆಗಳ ಹೊಣೆ. ಈ ನಿಟ್ಟಿನಲ್ಲಿ ವಿಮಾನ ಅಭಿವೃದ್ಧಿ ಪ್ರಾಧಿಕಾರ ನೀಡಿದ ಸಿಎಸ್‍ಆರ್ ನಿಧಿಯ ಸದ್ಭಳಕೆಯಾಗಲಿ ಎಂದರು.

ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಭೂಕುಸಿತ ಸಂಭವಿಸಿದ ವೇಳೆ ಸ್ಥಳಕ್ಕೆ ಶಾಸಕರೊಂದಿಗೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಇನ್ನೂ ಹೆಚ್ಚಿನ ನೆರವು ನೀಡಲು ಸಿದ್ಧವಿದ್ದು ನಾವು ಯೋಜನೆ ತಯಾರಿಸಿ ನೀಡಿ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಡೆಸುವ ಹೊಣೆ ಹೊರಬೇಕಿದೆ ಎಂದರು.

ವಿಮಾನ ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ವಿಭಾಗದ ಪ್ರಾದೇಶಿಕ ನಿರ್ದೇಶಕ ಶ್ರೀಕುಮಾರ್ ಅವರು ಮಾತನಾಡಿ, ಸಂಸ್ಥೆಯು ಸುಸ್ಥಿರ ಅಭಿವೃದ್ಧಿಯಲ್ಲಿ ನಂಬಿಕೆ ಇರಿಸಿದ್ದು, ನಾವು ಬೆಳೆಯುವ ಜೊತೆ ನಮ್ಮ ಸುತ್ತಮುತ್ತಲಿರುವವರನ್ನು ಬೆಳೆಸುವ ಹೊಣೆ ಹೊತ್ತಿದೆ. ನಮ್ಮ ಕಾಮಗಾರಿಯಿಂದಾಗಿ ಸಂಭವಿಸಿರುವ ಹಾನಿಗೆ ಸೂಕ್ತ ಪರಿಹಾರ ನೀಡಲು ಪ್ರಾಧಿಕಾರ ಬದ್ಧ ಎಂದರು. ಎಲ್ಲರೂ ಜೊತೆಯಾಗಿ ಬೆಳೆಯುವುದರೊಂದಿಗೆ ಮುಂದಿನ ವರ್ಷಗಳಲ್ಲಿ ಬಜಪೆ ವಿಮಾನ ನಿಲ್ದಾಣ ಪ್ರಮುಖ 10 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೊಂದಾಗುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.

ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಜಾರು ಎಂಬಲ್ಲಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ವತಿಯಿಂದ ಟ್ಯಾಕ್ಸಿವೇ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ 29-05-2018 ರಂದು ಸುರಿದ ಭಾರೀ ಮಳೆಗೆ ನೀರು ನುಗ್ಗಿ ಖಾಸಗಿ ಒಡೆತನದ ಬಹಳಷ್ಟು ಫಲವತ್ತಾದ ಕೃಷಿ ಭೂಮಿ ಹಾಗೂ ವಾಸದ ಮನೆಗಳಿಗೆ ಮಣ್ಣಿನಿಂದ ಕೂಡಿದ ನೀರು ತುಂಬಿ ಹಾನಿಯುಂಟಾಗಿರುತ್ತದೆ. ಹೀಗಾಗಿ ಈ ಪ್ರದೇಶದಲ್ಲಿ ಮಳೆ ನೀರು ಹರಿಯುವಿಕೆಗೆ ಶಾಶ್ವತ ಪರಿಹಾರವಾಗಿ ಚರಂಡಿ ರಚಿಸಲು ಕಾರ್ಯ ನಿರ್ವಾಹಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಇವರು ರೂ. 6.75 ಕೋಟಿಗಳ ವಿವರವಾದ ಯೋಜನಾ ವರದಿಯನ್ನು ತಯಾರಿಸಿ ಸಲ್ಲಿಸಿರುತ್ತಾರೆ.

ಈ ಯೋಜನೆಗೆ ತಗಲುವ ಮೊತ್ತವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಫಂಡ್ನಿಂದ ಭರಿಸಲು ಅನುಮೋದನೆ ನೀಡಿರುತ್ತಾರೆ ಎಂದು ಅವರು ಇದೇ ಸಂಧರ್ಭದಲ್ಲಿ ಹೇಳಿದರು.

ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಸಹಾಯಕ ಆಯುಕ್ತರು, ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಕಾರ್ಯ ನಿರ್ವಾಹಕ ಇಂಜಿನಿಯರ್ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಇವರನ್ನು ಅನುಷ್ಠಾನಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English