ಮಂಗಳೂರು: ಭಾಷೆಯನ್ನು ಕಲಿಯುವುದರಿಂದ ನಾಡಿನ ಸಂಸ್ಕೃತಿಯ ಪರಿಚಯ ಆಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿರುವ ಖ್ಯಾತ ಸಾಹಿತಿ, ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿಯ ಅಧಿಕಾರಿ ಕೇಶವ ಕುಡ್ಲ ಅವರು ಹೇಳಿದರು.
ತುಳು ಸಾಹಿತ್ಯ ಆಶ್ರಯದಲ್ಲಿ ತುಳು ಭಾಷಾ ಕಲಿಕಾ ತರಗತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ತಾನು ಮೂಲತಃ ಹಾಸನ ಜಿಲ್ಲೆಯವರಾಗಿದ್ದು 25 ವರ್ಷಗಳ ಹಿಂದೆ ಉದ್ಯೋಗ ನಿಮಿತ್ತವಾಗಿ ಬಂದು ತುಳುಭಾಷೆ ಕಲಿತು ಇಂದು ತುಳುನಾಡಿನವನೇ ಆಗಿದ್ದೇನೆ ಎಂದು ಹೇಳಿದರು. ತುಳುವರು ಹೊರಜಿಲ್ಲೆ – ಹೊರನಾಡಿನವರೊಂದಿಗೆ ಪ್ರೀತಿಯಿಂದ ಬೆರೆಯುತ್ತಾರೆ. ನಿರಂತರವಾಗಿ ತುಳು ಮಾತನಾಡುವುದರಿಂದ ಎಲ್ಲರಿಗೂ ತುಳುಭಾಷೆ ಕಲಿಯಲು ಸಾಧ್ಯ ಎಂದರು.
ಭಾಷೆಯನ್ನು ಕಲಿಯುವುದರ ಜತೆ ಇಲ್ಲಿಯ ಕಲೆ, ಸಂಸ್ಕೃತಿ, ಆರಾಧನೆ, ಆಚರಣೆಯ ಬಗ್ಗೆ ತಿಳಿದುಕೊಳ್ಳಬೇಕು. ಯಕ್ಷಗಾನ, ದೈವಾರಾಧನೆ, ಸಿರಿ ಜಾತ್ರೆ ಮೊದಲಾದ ಕಡೆಗಳಲ್ಲಿ ತುಳುಭಾಷೆಯ ಅರಾಧತೆಯ ಅರಿವು ಆಗುವುದು ಎಂದು ಕೇಶವ ಕುಡ್ಲ ನೀಡಿದರು.
ಮೂಡಬಿದ್ರೆಯ ಧವಳಾ ಕಾಲೇಜಿನ ಗ್ರಂಥಾಲಯ ಸಹಾಯಕ, ಸಾಹಿತಿ ಕೊಟ್ರಯ್ಯ ಐ. ಎಂ ಅವರು ತುಳುವಿನಲ್ಲಿ ಗ್ರಂಥರಚನೆಯ ಬಗ್ಗೆ ಮಾಹಿತಿ ನೀಡಿದರು. ದಾವಣಗೆರೆಯಿಂದ ಬಂದು ತುಳುನಾಡಿನ ತುಳುಭಾಷೆ ಕಲಿತು ತುಳು ನಿಘಂಟು ರಚಿಸುವಲ್ಲಿ ಹಲವು ತುಳುವರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿಯವರು ಅಧ್ಯಕ್ಷತೆವಹಿಸಿದ್ದರು. ತುಳುವೇತರರಿಗೆ ತುಳುಭಾಷೆ ಕಲಿಕೆ ಹಾಗೂ ತುಳು ಲಿಪಿ ಕಲಿಕೆಗೆ ಅಕಾಡೆಮಿ ವಿಶೇಷ ಪ್ರಯತ್ನ ಮಾಡುತ್ತಿದ್ದೆ. ತುಳುನಾಡಿಗೆ ಉದ್ಯೋಗ ನಿಮಿತ್ತವಾಗಿ ಬಂದಿರುವ ಹೊರಜಿಲ್ಲೆಯವರಿಗೆ ವ್ಯವಹಾರ ಸುಲಭವಾಗಲು ಇಂತಹ ಕಾರ‍್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅಕಾಡೆಮಿ ಸದಸ್ಯ ಎ. ಶಿವಾನಂದ ಕರ್ಕೇರ ಸ್ವಾಗತಿಸಿದರು. ಸುಧಾನಾಗೇಶ್ ವಂದಿಸಿದರು. ತುಳು ಲಿಪಿ ಶಿಕ್ಷಕಿ ವಿದ್ಯಾಶ್ರೀ ಎಸ್ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English