ನಾಪತ್ತೆಯಾಗಿದ್ದ ಲಾರಿ ಚಾಲಕ ಶವವಾಗಿ ಪತ್ತೆ..!

10:33 AM, Wednesday, September 19th, 2018
Share
1 Star2 Stars3 Stars4 Stars5 Stars
(No Ratings Yet)
Loading...

driverಮಂಗಳೂರು: ಲಾರಿಯಲ್ಲಿದ್ದ ವಸ್ತುಗಳನ್ನು ವಂಚಿಸಲಾಗಿದೆ ಎಂದು ಪ್ರಕರಣ ದಾಖಲಾಗಿದ್ದ ಮಂಗಳೂರಿನ ಸುಗಮ ಕಂಪನಿಯ ಲಾರಿ ಚಾಲಕ ಅನಿಲ್ ಕುಮಾರ್ ಎಂಬಾತನ ನಾಪತ್ತೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಲಾರಿ ಚಾಲಕ ಶವವಾಗಿ ಪತ್ತೆಯಾಗಿದ್ದಾನೆ.

ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ರುಚಿ ಸೋಯಾ ಇಂಡಸ್ಟ್ರೀಸ್ನಿಂದ ಲಾರಿಯಲ್ಲಿ ಹೊರಟಿದ್ದ ಚಾಲಕನನ್ನು ದುಷ್ಕರ್ಮಿಗಳು ದೋಚುವ ಉದ್ದೇಶದಿಂದ ಹತ್ಯೆಗೈದಿರುವುದು ಬಹಿರಂಗಗೊಂಡಿದೆ. ಲಾರಿ ಚಾಲಕನ ಅನಿಲ್ ಕುಮಾರ್ನನ್ನು ಹತ್ಯೆಗೈದ ಆರೋಪಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕು ಕೆಂಪನಹಳ್ಳಿ ಕಂಬಿಪುರ ಗ್ರಾಮ ನಿವಾಸಿ ಅಸಾದುಲ್ಲಾ ಷರೀಪ್ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಲಾರಿ ಚಾಲಕ ಅನಿಲ್ ಕುಮಾರ್, ಸುಗಮ ಕಂಪನಿಯ ಲಾರಿಯಲ್ಲಿ ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿಯಲ್ಲಿರುವ ರುಚಿ ಸೋಯ ಇಂಡಸ್ಟ್ರೀಯಿಂದ ಸುಮಾರು 7,50,000 ಮೌಲ್ಯದ 1050 ಬಾಕ್ಸ್ ತಾಳೆ ಎಣ್ಣೆಯನ್ನು ಬೆಂಗಳೂರಿಗೆ ಸಾಗಿಸುತ್ತಿದ್ದರು. ಆದರೆ ಲಾರಿ ನಿಗದಿತ ಸ್ಥಳಕ್ಕೆ ತಲುಪದೇ ಇದ್ದು, ಈ ಬಗ್ಗೆ ಲಾರಿ ಚಾಲಕನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಆರೋಪಿ ಅಸಾದುಲ್ಲಾ ಷರೀಫ್(49) ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಆತನು ತನ್ನ ಸಹಚರರೊಂದಿಗೆ ಸೇರಿಕೊಂಡು ಕೊಲೆ ಮಾಡಿ ಶವವನ್ನು ರಾಮನಗರ ಜಿಲ್ಲೆಯ ಕುಂಬಳಗೋಡು ಎಂಬಲ್ಲಿ ಹೂತು ಹಾಕಿ ಲಾರಿಯಲ್ಲಿದ್ದ ಮಾಲನ್ನು ದೋಚಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಅನಿಲ್ ಕುಮಾರ್ನ ಶವವನ್ನು ಬೆಂಗಳೂರು ದಕ್ಷಿಣ ಉಪ-ವಿಭಾಗಾಧಿಕಾರಿ ಮೂಲಕ ಮಣ್ಣಿನಿಂದ ಹೊರತೆಗೆದು ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತೆ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್.ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಮ್, ಪಣಂಬೂರು ಠಾಣಾ ಪಿ.ಎಸ್.ಐ ಉಮೇಶ್ ಕುಮಾರ್ ಎಂ.ಎನ್. ಹಾಗೂ ಪಣಂಬೂರು ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿ ಪಾಲ್ಗೊಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English