ನದಿಗೆ ಆಟವಾಡಲು ಹೋಗಿದ್ದ ನಾಲ್ವರು ಬಾಲಕರು ನೀರು ಪಾಲು

8:05 PM, Monday, January 9th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Childrens Died

ಬೆಳ್ತಂಗಡಿ :  ರವಿವಾರದ ರಜಾ ಪ್ರಯುಕ್ತ ಮನೆ ಸಮೀಪದ ನದಿಗೆ ಸಂಜೆ ಆಟವಾಡಲು ಹೋಗಿದ್ದ ನಾಲ್ವರು ಬಾಲಕರು  ಸುದೇಮುಗೇರು ಎಂಬಲ್ಲಿ  ನೀರು ಪಾಲಾದ ಘಟನೆ ವರದಿಯಾಗಿದೆ.

ಕೇವಲ ಆರಡಿಯಷ್ಟು ನೀರು ನಾಲ್ವರು ಮಕ್ಕಳ ಪ್ರಾಣವನ್ನು ಬಲಿತೆಗೆದು ಕೊಂಡಿದೆ. ಲಾರಿ ನಿಲ್ಲಿಸಿ ಮರಳು ತೆಗೆಯುವ ಸ್ಥಳದಲ್ಲಿ ನೀರಿದ್ದರೂ ನಡೆದಾಡುವಷ್ಟು ಆಳದ ದಾರಿ ಇದೆ.  ರಜಾದ ಮಜಾ ಅನುಭವಿಸಲು ಈ ಮಕ್ಕಳು ಅಪರಾಹ್ನ ಸುಮಾರು 3.30ರ ವೇಳೆಗೆ ನದಿಗೆ ತೆರಳಿದ್ದರು. ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಆಟವಾಡುತ್ತಿದ್ದರು.  3.45ರ ವೇಳೆಗೆ ಮಕ್ಕಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಮಕ್ಕಳ ಪೈಕಿ ಒಬ್ಟಾತ ನೀರಿಗೆ ಬಿದ್ದಾತ ಇತರ ಮಕ್ಕಳು ರಕ್ಷಣೆಗೆ ಧಾವಿಸಿ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಳ್ತಂಗಡಿ ಎಸ್‌ಐ ಯೋಗೀಶ್‌ ಕುಮಾರ್‌ ಮತ್ತು ಸಿಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೃತ ಬಾಲಕರನ್ನು ಕೋರ್ಟ್‌ ರಸ್ತೆಯ ಸಂಜಯ ನಗರದ ಕಬೀರ್‌ ಜಮೀಲಾ ದಂಪತಿಯ ಪುತ್ರ ಅಬೂಬಕ್ಕರ್‌ ಆಫಿರ್‌ (11), ಅದೇ ಕುಟುಂಬದವರಾದ ಹಾರೂನ್‌ ರಶೀದ್‌ ರಶೀದಾ ದಂಪತಿಯ ಮಕ್ಕಳಾದ ಜಾವೇದ್‌ ಹಸನ್‌ (12), ಜಂಶೀದ್‌ (7), ಸಯ್ಯದ್‌ ತಾಸೀನ್‌ ಅವರ ಪುತ್ರ ಸಯ್ಯದ್‌ ನಾಸೀರ್‌ (12) ಎಂದು ಗುರುತಿಸಲಾಗಿದೆ.

ಹಾರೂನ್‌ ರಶೀದ್‌ ರಶೀದಾ ದಂಪತಿಗೆ ಮಕ್ಕಳಾದ ಜಾವೇದ್‌ ಹಸನ್‌ ಜಂಶೀದ್‌ ಇಬ್ಬರೇ ಮಕ್ಕಳು. ಹಾರೂನ್‌ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅವರು ಎಸ್‌ಡಿಪಿಐ ಪಕ್ಷದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸಮಿತಿ ಅಧ್ಯಕ್ಷ ಅಕ್ಬರ್ ಅವರ ಸಹೋದರ. ಅಕ್ಬರ್ಅವರ ಸಹೋದರಿ ಜಮೀಲಾ ಅವರ ಪುತ್ರ ಆಫಿರ್‌. ಮೂರು ಮಕ್ಕಳು ಒಂದೇ ಕುಟುಂಬಕ್ಕೆ ಸೇರಿದವರು. ಈ ಮೂವರು ಹಸನಬ್ಬ ಅವರ ಮೊಮ್ಮಕ್ಕಳು. ನಾಸಿರ್‌ ಪಕ್ಕದ ಮನೆಯ ಬಾಲಕ. ಆಫೀರ್‌ಗೆ 7 ವರ್ಷದ ತಂಗಿ ಅರಫಾ ಎಂಬಾಕೆ ಇದ್ದಾಳೆ. ನಾಸಿರ್‌ನ ತಂದೆ ಮುಂಬೈಯಲ್ಲಿ ಉದ್ಯೋಗಿ. ನಾಸಿರ್‌ ತಾಯಿಯ ತಂದೆ ಮುನೀರ್‌ ಅವರ ಮನೆಯಿಂದ ಶಾಲೆಗೆ ಹೋಗುತ್ತಿದ್ದ.

ತಹಶೀಲ್ದಾರ್‌ ಕುಸುಮಾ ಕುಮಾರಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು. ಘಟನೆಗೆ ಸಂಬಂಧಿಸಿ ಸರಕಾರದಿಂದ ಯಾವುದೇ ರೀತಿಯ ಪರಿಹಾರ ದೊರೆಯುವ ಸಾಧ್ಯತೆಯಿಲ್ಲ. ಪ್ರಯತ್ನಿಸಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ಮೃತರ ಮನೆಗೆ ಜಿ.ಪಂ. ಸದಸ್ಯ ಶೈಲೇಶ್‌ ಕುಮಾರ್‌, ಶಾಲಾ ಆಡಳಿತ ಮಂಡಳಿ ಪರವಾಗಿ ಫಾ| ಜೋಸೆಫ್‌ ವಲಿಯಪರಂಬಿಲ್‌, ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರಣೇಂದ್ರ ಜೈನ್‌, ಎಸ್‌ಡಿಪಿಐ ಪದಾಧಿಕಾರಿಗಳು ತೆರಳಿ ಸಂತಾಪ ಸೂಚಿಸಿದ್ದಾರೆ.

image description

Comments are closed.