ಮಂಗಳೂರು: 105 ಗ್ರಾಂ ಚಿನ್ನಾಭರಣ, 32 ಸಾವಿರ ನಗದು ಮತ್ತು ಮೊಬೈಲ್ ಫೋನ್ ಕಳೆದುಕೊಂಡಿದ್ದ ಮಹಿಳೆಗೆ ವ್ಯಕ್ತಿಯ ಪ್ರಾಮಾಣಿಕತೆಯಿಂದ ಬ್ಯಾಗ್ ಕೈಸೇರಿರುವ ಘಟನೆ ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಿರುಪತಿ ದರ್ಶನ ಮುಗಿಸಿ ಬೆಂಗಳೂರಿನಿಂದ ಉಡುಪಿಗೆ ಖಾಸಗಿ ಬಸ್ನಲ್ಲಿ ಬಂದಿದ್ದ ಬೈಂದೂರಿನ ಕೋನೂರು ಪಡುವರಿ ಗ್ರಾಮದ ಪ್ರೇಮಾ ಎಂಬುವರು ಉಡುಪಿಯಲ್ಲಿ ಬಸ್ ಇಳಿದಾಗ ಅವರ ಬ್ಯಾಗ್ ನಾಪತ್ತೆಯಾಗಿತ್ತು. ಈ ಬಗ್ಗೆ ಹುಡುಕಾಟ ನಡೆಸುತ್ತಿದ್ದ ಕುಟುಂಬಸ್ಥರಿಗೆ ಪ್ರಾಮಾಣಿಕ ವ್ಯಕ್ತಿವೋರ್ವ ತನಗೆ ಸಿಕ್ಕಿದ್ದ ಬ್ಯಾಗ್ನ್ನು ಮರಳಿಸಿದ್ದಾರೆ.
ಈ ಬ್ಯಾಗ್ ಚಾರ್ಮಾಡಿ ರಸ್ತೆಯಲ್ಲಿ ಬಿದ್ದಿದ್ದನ್ನು ನೋಡಿದ್ದ ಚಾರ್ಮಾಡಿ ಗ್ರಾಮದ ನಿವಾಸಿ ಬಿ ಮುಹಮ್ಮದ್ ಅಲಿ ಎಂಬುವರು ಚಿನ್ನಾಭರಣ ಇದ್ದ ಬ್ಯಾಗ್ನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದರು. ಈ ಬ್ಯಾಗ್ನಲ್ಲಿದ್ದ ಮಾಹಿತಿಯ ಆಧಾರದಲ್ಲಿ ಪೊಲೀಸರು ಬ್ಯಾಗ್ ಕಳೆದುಕೊಂಡ ಮಹಿಳೆಯನ್ನು ಸಂಪರ್ಕಿಸಿ ಬ್ಯಾಗ್ನ್ನು ಅವರ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಬೆಲೆಬಾಳುವ ಚಿನ್ನಾಭರಣವನ್ನು ಹಿಂದಿರುಗಿಸಿರುವ ಮುಹಮ್ಮದ್ ಅಲಿ ಅವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Click this button or press Ctrl+G to toggle between Kannada and English