ತಿರುವನಂತಪುರಂ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ನಿರ್ದೇಶಕ ಬಾಲಭಾಸ್ಕರ್ ಕೊನೆಯುಸಿರೆಳೆದಿದ್ದಾರೆ.ಅವರು ಸೋಮವಾರ ಮಧ್ಯರಾತ್ರಿ 12.55 ಗಂಟೆ ಸುಮಾರಿಗೆ ನಿಧನರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕಳೆದ ಮಂಗಳವಾರ ದೇವಸ್ಥಾನದಿಂದ ವಾಪಸ್ ಆಗುತ್ತಿದ್ದ ವೇಳೆ ಪಲ್ಲಿಪುರಂ ಎಂಬಲ್ಲಿ ಅಪಘಾತಕ್ಕೀಡಾಗಿದ್ದರು. ದುರ್ಘಟನೆಯಲ್ಲಿ ಭಾಸ್ಕರ್ ಅವರ ಪುಟ್ಟ ಮಗಳು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಭಾಸ್ಕರ್ ಹಾಗೂ ಅವರ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾಸ್ಕರ್ ಇಂದು ಅಂತಿಮ ವಿದಾಯ ಹೇಳಿದ್ದಾರೆ. ಅವರ ಪತ್ನಿಗೆ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ದಂಪತಿಗೆ ಮದುವೆಯಾದ 15 ವರ್ಷಗಳ ಬಳಿಕ ಮಗಳು ಜನಿಸಿದ್ದಳು. ಮಗಳು ಹುಟ್ಟಿದ ಹರಕೆ ತೀರಿಸಿ ಹಿಂತಿರುಗುವಾಗಲೇ ಅಪ್ಪ-ಮಗಳು ದುರಂತ ಅಂತ್ಯ ಕಂಡಿದ್ದಾರೆ. ಪತ್ನಿ ಹಾಗೂ ಚಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇನ್ನು 17 ನೇ ವಯಸ್ಸಿನಲ್ಲಿಯೇ ಸಂಗೀತ ಲೋಕಕ್ಕೆ ಕಾಲಿಟ್ಟಿದ್ದ ಭಾಸ್ಕರ್, ಮಲಯಾಳಂ ಚಿತ್ರವೊಂದಕ್ಕೆ ಸಂಗೀತ ಸಂಯೋಜಿಸುವ ಮೂಲಕ ಖ್ಯಾತಿ ಗಳಿಸಿದ್ದರು. ಇವರು ಸಾಕಷ್ಟು ಚಿತ್ರಗಳಿಗೆ ಸಂಗೀತ ನೀರ್ದೇಶನ ಮಾಡಿದ್ದಾರೆ.
Click this button or press Ctrl+G to toggle between Kannada and English