ಮಂಗಳೂರು: ಡಿವೈಎಫ್ಐ ಕಾರ್ಯಕರ್ತ ರಿಯಾಜ್ ಮಾಂತೂರು ಮೇಲೆ ವೇಣೂರು ಬಳಿ ಗಸ್ತಿನಲ್ಲಿದ್ದ ಪೊಲೀಸರು ದೈಹಿಕ ಹಲ್ಲೆ ನಡೆಸಿ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆಂದು ಆರೋಪಿಸಿ ಡಿವೈಎಫ್ಐ ಜಿಲ್ಲಾ ಘಟಕವು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದೆ.
ರಿಯಾಜ್ ಮಾಂತೂರು(28) ಹಲವು ವರ್ಷಗಳಿಂದ ಡಿವೈಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಈತ ಅಕ್ಟೋಬರ್ 2ರಂದು ರಾತ್ರಿ ಗಂಜಿಮಠದಲ್ಲಿರುವ ತನ್ನ ಅಂಗಡಿ ಮುಚ್ಚಿ ಬೆಳ್ತಂಗಡಿಯ ತನ್ನ ಮನೆಗೆ ಸಹೋದರ ಇರ್ಷಾದ್ (18) ಜೊತೆಗೆ ಮೋಟಾರ್ ಸೈಕಲ್ನಲ್ಲಿ ತೆರಳುತ್ತಿದ್ದರು. ಈ ವೇಳೆ ರಾತ್ರಿ 11ರ ಸುಮಾರಿಗೆ ವೇಣೂರು ಬಳಿ ಗಸ್ತಿನಲ್ಲಿದ್ದ ಪೊಲೀಸರ ತಂಡ ರಿಯಾಜ್ ನನ್ನುತಡೆದು ವಾಹನದ ದಾಖಲೆ ಕೇಳಿದ್ದಾರೆ. ರಿಯಾಜ್ ಬಳಿ ಚಾಲನಾ ಪರವಾನಗಿ ಮಾತ್ರ ಇದ್ದು, ಅದನ್ನು ಪೊಲೀಸರಿಗೆ ತೋರಿಸಿದ್ದಾರೆ. ವಾಹನ ದಾಖಲೆಗಳು ಮನೆಯಲ್ಲಿದ್ದು ಬೆಳಗ್ಗೆ ಹಾಜರು ಪಡಿಸುವುದಾಗಿ ಹೇಳಿದ್ದಾರೆ. ದಾಖಲೆ ತೋರಿಸದೆ ಸ್ಥಳದಿಂದ ತೆರಳಲಾಗದು ಎಂದು ಬೆದರಿಸಿ ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸಿದ್ದಾರೆ ಎಂದು ರಿಯಾಜ್ ಹೇಳಿಕೊಂಡಿದ್ದಾರೆ.
ತಕ್ಷಣ ಪೊಲೀಸರು ರಿಯಾಜ್ ಮತ್ತು ಇರ್ಷಾದ್ನನ್ನು ಬಲವಂತವಾಗಿ ಖಾಸಗಿ ವಾಹನವೊಂದರಲ್ಲಿ ಕೂಡಿ ಹಾಕಿ ಹಲ್ಲೆಗೈದು ವೇಣೂರು ಠಾಣೆಗೆ ಕರೆದೊಯ್ದಿದ್ದಾರೆ.
ಠಾಣೆಗೆ ತಲುಪಿದ ತಕ್ಷಣ ತಾರನಾಥ, ರಂಜಿತ್ ಎಂಬ ಇಬ್ಬರು ಪೊಲೀಸರ ಮೇಲೆ ಕೈ ಮಾಡಿದ್ದಾರೆ” ಎಂದು ಠಾಣೆಯಲ್ಲಿದ್ದ ಪೊಲೀಸರಿಗೆ ಸುಳ್ಳು ಆರೋಪ ಮಾಡಿ ಲಾಕಪ್ನಲ್ಲಿ ಥಳಿಸಿ “ಬ್ಯಾರಿಗಳು, ಕಳ್ಳರು, ಉಗ್ರಗಾಮಿಗಳ ತರ ಕಾಣುತ್ತೀರಿ” ಎಂದು ಜಾತಿ ನಿಂದನೆಗೈದು ಅವಮಾನಿಸಿ, ಗಾಂಜಾ ಕೇಸು, ತಲವಾರು ಹೊಂದಿದ ಕೇಸು ಜಡಿಯುವುದಾಗಿ ಬೆದರಿಸಿ ಪೊಲೀಸರ ದೌರ್ಜನ್ಯಗಳನ್ನು ಬಾಯಿ ಬಿಡಬಾರದು ಎಂಬ ಷರತ್ತಿನೊಂದಿಗೆ ಬೆಳಗ್ಗಿನ ಜಾವ ಮೂರು ಗಂಟೆಗೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಎಂದು ಆರೋಪಿಸಿದ್ದಾರೆ.
ಜನತೆಗೆ ಪೊಲೀಸರ ಮೇಲಿನ ನಂಬಿಕೆಗೆ ಚ್ಯುತಿ ತರುವಂತಿದೆ ರಿಯಾಜ್, ಇರ್ಷಾದ್ ಮತ್ತವರ ಕುಟುಂಬ ಈ ಘಟನೆಯಿಂದ ಬೆದರಿದ್ದು, ಮಾನಸಿಕ ಆಘಾತಕ್ಕೆ ಗುರಿಯಾಗಿದ್ದಾರೆ. ಸಾಮಾಜಿಕವಾಗಿಯೂ ಪೊಲೀಸರ ಈ ನಡವಳಿಕೆ ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗುತ್ತದೆ. ಹಿರಿಯ ಅಧಿಕಾರಿಗಳಾದ ತಾವುಗಳು ಈ ಘಟನೆಯ ಕುರಿತು ಮಧ್ಯ ಪ್ರವೇಶಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಬೇಕು ಹಾಗೂ ಸಂತ್ರಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮನವಿಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English