ಮಂಗಳೂರು: ಮಂಗಳೂರು ನಗರ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಸರಕಳ್ಳನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಲವಾರು ಸರಗಳ್ಳತನ ಪ್ರಕರಣಗಳ ಆರೋಪಿ ಮಂಗಳೂರಿನ ಸುರತ್ಕಲ್ನ ನಿವಾಸಿ ಶಾಕೀಬ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಕಳವು ಮಾಡಲಾದ 140 ಗ್ರಾಂ ತೂಕದ 5 ಚಿನ್ನದ ಸರ, ಒಂದು ಕರಿಮಣಿ ಸರ, 2 ಚಿನ್ನದ ಪೆಂಡೆಂಟ್ ಸಹಿತ 4,15,000 ರೂ. ಮೌಲ್ಯದ ಚಿನ್ನಾಭರಣ, ರಿಟ್ಜ್ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಈತ ಮಂಗಳೂರು ನಗರದ ವಾಮಂಜೂರುನಲ್ಲಿ ಮಾರುತಿ ರಿಟ್ಜ್ ಕಾರಿನಲ್ಲಿ ಬಂದು ಸರಕಳ್ಳತನ ಮಾಡಲು ಸಂಚು ರೂಪಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಾರುತಿ ರಿಟ್ಜ್ ಕಾರನ್ನು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷನಗರದಲ್ಲಿ ಅಂಗಡಿಯಲ್ಲಿದ್ದ ಮಹಿಳೆಯ ಚಿನ್ನದ ಚೈನ್ ಕಳವು ಮಾಡಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರ್ವತ್ತೂರಿಲ್ಲಿ ಮಹಿಳೆಯ ಚಿನ್ನದ ಸರ ಸುಲಿಗೆ, ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾರ್ ಖಾನ್ನಲ್ಲಿ ಮಹಿಳೆಯ 2 ಚಿನ್ನದ ಸರಗಳನ್ನು ಎಗರಿಸಿದ್ದು ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿವೆ. ಅಲ್ಲದೆ ಕೊಲೆ ಯತ್ನ, ದರೋಡೆ, ಬೈಕ್ ಕಳವು ಪ್ರಕರಣಗಳನ್ನೂ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಪ್ರಕರಣದಲ್ಲಿ ಆರೋಪಿ ಶಾಕಿಬ್ ಎಂಬಾತನನ್ನೂ ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆದಿದೆ.
ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷನಗರ ಎಂಬಲ್ಲಿ ದಿನಾಂಕ: 16-08-2018 ರಂದು ಸಂಜೆ ಸುಮಾರು 7-30 ಗಂಟೆಗೆ ಮಾರುತಿ ರಿಡ್ಜ್ ಕಾರಿನಲ್ಲಿ ಯಶೋದ ಎಂಬವರ ಅಂಗಡಿಗೆ ಹೋಗಿ 10 ರೂಪಾಯಿಯ ನೆಲಕಡಲೆ ಕೇಳಿಕೊಂಡು ನಂತರ ಅವರು ನೆಲಕಡಲೆ ಕಟ್ಟುತ್ತಿದ್ದ ಸಮಯ ಅವರ ಕುತ್ತಿಗೆಯಿಂದ ಚಿನ್ನದ ಚೈನ್ ನ್ನು ಸುಲಿಗೆ ಮಾಡಿದ ಪ್ರಕರಣ.( ಮೂಡಬಿದ್ರಿ ಪೊಲೀಸ್ ಠಾಣಾ ಮೊ.ನಂ: 298/2018 ಕಲಂ: 392 ಐಪಿಸಿ)
ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರ್ವತ್ತೂರು ಎಂಬಲ್ಲಿ ದಿನಾಂಕ: 05-04-2018 ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕರಿಯಾ ಮೂಲ್ಯ ಎಂಬವರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣ.( ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 55/2018 ಕಲಂ: 392 ಐಪಿಸಿ).
ಉಡುಪಿ ಜಿಲ್ಲೆಯ ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾರ್ ಖಾನ್ ಎಂಬಲ್ಲಿ ದಿನಾಂಕ: 15-07-2018 ರಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಲಿಸ್ ಕುಟಿನ್ಹೋ(72) ಎಂಬ ಮಹಿಳೆಯ ಎಂಬವರ ಕುತ್ತಿಗೆಯಿಂದ 2 ಚಿನ್ನದ ಸರಗಳನ್ನು ಸುಲಿಗೆ ಮಾಡಿದ ಪ್ರಕರಣ. ( ಉಡುಪಿ ಜಿಲ್ಲೆ ಶಿರ್ವಾ ಪೊಲೀಸ್ ಠಾಣಾ ಮೊ.ನಂ: 48/2018 ಕಲಂ: 392 ಐಪಿಸಿ).
ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುಂದೂರು ಗ್ರಾಮದ ಹಾರ್ಜಡ್ಡು ಎಂಬಲ್ಲಿ ದಿನಾಂಕ: 29-08-2018 ರಂದು ಶ್ರೀಮತಿ ಗೀತಾ ಕಿಣಿ ಎಂಬವರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣ.(ಉಡುಪಿ ಜಿಲ್ಲಾ ಕಾರ್ಕಳ ನಗರ ಪೊಲೀಸ್ ಠಾಣಾ ಮೊ.ನಂ: 143/2018 ಕಲಂ: 392 ಐಪಿಸಿ)
ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರೆಂಜಾಳ ಮಾರಿಗುಡಿ ಎಂಬಲ್ಲಿ ದಿನಾಂಕ: 30-08-2018 ರಂದು ಶ್ರೀಮತಿ ಗೌರಿ ನಾಯಕ್ ಎಂಬವರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಿದ ಪ್ರಕರಣ.( ಉಡುಪಿ ಜಿಲ್ಲೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 99/2018 ಕಲಂ: 392 ಐಪಿಸಿ)
Click this button or press Ctrl+G to toggle between Kannada and English