ಮಂಗಳೂರು: ಜನತೆಯ ತೀವ್ರ ವಿರೋಧ, ಹಲವು ಹಂತದ ಹೋರಾಟ, ಸುರತ್ಕಲ್ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸುವ ರಾಜ್ಯ ಸರ್ಕಾರದ ಪ್ರಸ್ತಾಪದ ಹೊರತಾಗಿಯೂ ಎನ್ಐಟಿಕೆ ಸಮೀಪ ಇರುವ ಅಕ್ರಮ ಟೋಲ್ ಕೇಂದ್ರವನ್ನು ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರಾಕರಿಸುತ್ತಿದೆ. 3.1. 2018 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಉಪಸ್ಥಿತಿಯಲ್ಲಿ ರಾಜ್ಯ ಸರಕಾರ ನಡೆಸಿದ ಸಭೆಯಲ್ಲಿ “ಸುರತ್ಕಲ್ ಟೋಲ್ ಗೇಟ್ ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲೀನಗೊಳ್ಳಬೇಕು, ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಕೇಂದ್ರವನ್ನು ಮುಂದುವರಿಸಬಾರದು” ಎಂಬ ನಿರ್ಣಯ ಆಂಗೀಕಾರಗೊಂಡಿತ್ತು.
ನಿರ್ಣಯ ಅದೇ ತಿಂಗಳು 26 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಕಚೇರಿಗೆ ತಲುಪಿತ್ತು. ಆ ನಂತರವೂ ಸತತ ಎರಡು ಬಾರಿ ಟೋಲ್ ಸಂಗ್ರಹದ ಗುತ್ತಿಗೆಯನ್ನು ನಿಯಮ ಬಾಹಿರವಾಗಿ ನವೀಕರಿಸಲಾಯಿತು.
ಸೆಪ್ಟಂಬರ್ 26 ರ ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ ನಡೆದ ಪಾದಯಾತ್ರೆಯ ಮುನ್ನಾ ದಿನವೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಸುರತ್ಕಲ್ ಟೋಲ್ ಗೇಟ್ ಮುಚ್ಚುವ ಪ್ರಸ್ತಾಪವನ್ನು ಪುನರುಚ್ಚರಿಸಲಾಗಿತ್ತು. ಸಂಸದ ನಳಿನ್ ಕುಮಾರ್ ಇನ್ನೂ ಒಂದು ಹೆಜ್ಜೆ ಮಂದಕ್ಕೆ ಹೋಗಿ “ವಿಲೀನ ಆದರಷ್ಟೇ ಸಾಲದು, ಸುರತ್ಕಲ್ ನಂತೂರು ರಸ್ತೆಯಲ್ಲಿ ಟೋಲ್ ಸಂಗ್ರಹ ರದ್ದತಿಯ ಪ್ರಸ್ತಾಪ ಕಳುಹಿಸಿ” ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಇದೇ ಅಕ್ಟೋಬರ್ 30 ಕ್ಕೆ ಸುರತ್ಕಲ್ ಟೋಲ್ ಸಂಗ್ರಹ ಗುತ್ತಿಗೆ ಮುಗಿಯಿತ್ತಿದ್ದು, ನಂತರ ಯಾವುದೇ ಕಾರಣಕ್ಕೂ ಅಕ್ರಮ ಟೋಲ್ ಸಂಗ್ರಹ ಮುಂದುವರಿಯುವುದಿಲ್ಲ ಎಂದು ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ’ ಸಹಿತ ನಾಗರಿಕರು ನಂಬಿದ್ದರು.
ಆದರೆ ಈಗ ನಮ್ಮ ನಂಬಿಕೆ ಹುಸಿಯಾಗಿದ್ದು ಮತ್ತೊಮ್ಮೆ ಟೋಲ್ ಸಂಗ್ರಹ ಗುತ್ತಿಗೆ ನವೀಕರಣದ ಟೆಂಡರ್ ಕರೆಯಲಾಗಿದೆ. ಇದು ನಿಯಮಗಳ ಉಲ್ಲಂಘನೆ ಮಾತ್ರ ಅಲ್ಲ. ಜನಸಾಮಾನ್ಯರ ಮೇಲೆ ಮಾಡಿರುವ ಆಕ್ರಮಣ. ಹೆದ್ದಾರಿ ಪ್ರಾಧಿಕಾರದ ಈ ಸರ್ವಾಧಿಕಾರದ ನಡೆಯನ್ನು ಮಂಗಳೂರಿನ ಜನತೆ ಒಕ್ಕೊರಲಿನಿಂದ ವಿರೋಧಿಸುತ್ತಾರೆ. ಈ ನಿಯಮ ಬಾಹಿರ ನವೀಕರಣಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ನೇರ ಹೊಣೆಯಾಗಿದ್ದಾರೆ. ಸಂಸದರ ಜನವಿರೋಧಿ ನಡೆ, ಹೆದ್ದಾರಿ ಗುತ್ತಿಗೆದಾರರ ಪರವಾದ ನಿಲುವನ್ನು ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಈ ಅಕ್ರಮ ಟೋಲ್ ಸಂಗ್ರಹ, ಹೆದ್ದಾರಿ ದುರವಸ್ಥೆ, ಕೂಳೂರು ಸೇತುವೆಯ ಕರುಣಾಜನಕ ಸ್ಥಿತಿಯನ್ನು ಯಾವುದೆ ಕಾರಣಕ್ಕು ಒಪ್ಪಲಾಗದು. ಈಗ ಕರೆದಿರುವ ಟೋಲ್ ಸಂಗ್ರಹ ಗುತ್ತಿಗೆಯ ಟೆಂಡರ್ ಹಿಂಪಡೆಯಬೇಕು, ಅಕ್ಟೋಬರ್ 30 ರ ನಂತರ ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹಿಸಬಾರದು, ಕೂಳೂರು ಸೇತುವೆಯನ್ನು ತಕ್ಷಣ ದುರಸ್ಥಿಗೊಳಿಸಿ, ಹೊಸ ಸೇತುವೆ ನಿರ್ಮಾಣಗೊಳ್ಳುವವರಗೆ ಸಂಚಾರಕ್ಕೆ ಯೋಗ್ಯಗೊಳಿಸಬೇಕು ಎಂದು ಒತ್ತಾಯಿಸಿ ಅಕ್ಟೋಬರ್ 22 ರಿಂದ ಸುರತ್ಕಲ್ ಜಂಕ್ಷನ್ ನಲ್ಲಿ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ನಿರ್ಧರಿಸಿದೆ. ಸುರತ್ಕಲ್ ಟೋಲ್ ಗೇಟ್ ಮುಚ್ವುವ ನಿರ್ಧಾರದ ಘೋಷಣೆ ಹೊರ ಬೀಳುವವರೆಗೆ ಅನಿರ್ದಿಷ್ಟ ಧರಣಿ ಮುಂದುವರಿಯಲಿದೆ.
ಜನತೆ, ಜನಪರ ಸಂಘ ಸಂಸ್ಥೆಗಳು ನಾಗರಿಕರ ಹಕ್ಕುಗಳಿಗಾಗಿ ನಡೆಯುವ ಮಹತ್ವದ ಹೋರಾಟದಲ್ಲಿ ನೇರವಾಗಿ ಭಾಗಿಯಾಗುವ ಮೂಲಕ ನಮ್ಮ ಹೋರಾಟಕ್ಕೆ ಬಲತುಂಬಬೇಕು, ಹೆದ್ದಾರಿ ಪ್ರಾಧಿಕಾರದ ಧೋರಣೆಗಳಿಗೆ ಪ್ರಬಲ ಪ್ರತಿರೋಧ ದಾಖಲಿಸಬೇಕು ಎಂದು ವಿನಂತಿಸುತ್ತಿದ್ದೇವೆ.
ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದವರು. ಪುರುಷೋತ್ತಮ ಚಿತ್ರಾಪುರ ಮಾಜಿ ಉಪಮೇಯ್, ಮನಪಾ ಸದಸ್ಯರು, ರೇವತಿ ಪುತ್ರನ್ ಮನಪಾ ಸದಸ್ಯರು, ದಯಾನಂದ ಶೆಟ್ಟಿ ಮನಪಾ ಸದಸ್ಯರು, ಬಿ ಕೆ ಇಮ್ತಿಯಾಜ್ ಡಿವೈಎಫ್ಐ ದ ಕ ಜಿಲ್ಲಾಧ್ಯಕ್ಷರು, ದಿನೇಶ್ ಕುಂಪಲ ದ ಕ ಜಿಲ್ಲಾ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮಾಕ್ಸಿಕ್ಯಾಬ್ ಎಸೋಸಿಯೇಷನ್, ಭರತ್ ಶೆಟ್ಟಿ ಕುಳಾಯಿ, ಅಧ್ಯಕ್ಷರು ನಾಗರಿಕ ಸಮಿತಿ ಕುಳಾಯಿ, ರಾಜೇಶ್ ಶೆಟ್ಟಿ ಪಡ್ರೆ, ಗಂಗಾಧರ ಬಂಜನ್ ಸಾಮಾಜಿಕ ಕಾರ್ಯಕರ್ತರು.
Click this button or press Ctrl+G to toggle between Kannada and English