ಮಂಗಳೂರು: ಶ್ರೀ ಕ್ಷೇತ್ರ ಕುದ್ರೋಳಿಯ ವತಿಯಿಂದ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವ ಅ.19 ರಂದು ಸಂಪನ್ನಗೊಳ್ಳಲಿದ್ದು, ಈ ಸಂದರ್ಭ ವೈಭವದ ಶೋಭಾಯಾತ್ರೆ ನಡೆಯಲಿದೆ.
ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ನಾಡಿನ ನಾನಾ ಭಾಗದಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದೆ. ಈ ಸಂದರ್ಭ ರಾತ್ರಿಯಿಡೀ ನಡೆಯುವ ಶೋಭಾಯಾತ್ರೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಈಗಾಗಲೇ ಟ್ಯಾಬ್ಲೋ ಸಂಘಟಕರು, ಪೊಲೀಸ್ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಎರಡು ಸುತ್ತಿನ ಸಭೆ ನಡೆಸಿದ್ದು, ಮೆರವಣಿಗೆಯ ರೂಪುರೇಷೆಗಳನ್ನು, ನಿಬಂಧನೆಗಳನ್ನು ಈಗಾಗಲೇ ತಿಳಿಸಲಾಗಿದೆ ಎಂದು ಶ್ರೀಕ್ಷೇತ್ರ ಕುದ್ರೋಳಿಯ ಆಡಳಿತ ಮಂಡಳಿಯ ಖಜಾಂಚಿ ಪದ್ಮರಾಜ್ ಆರ್. ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.
ಈ ಬಾರಿ 75 ಕ್ಕೂ ಅಧಿಕ ಸ್ತಬ್ಧ ಚಿತ್ರಗಳು, 100ಕ್ಕೂ ಅಧಿಕ ವೇಷ ಭೂಷಣಗಳು, ವಾದ್ಯಮೇಳಗಳ ತಂಡಗಳು ಪಾಲ್ಗೊಳ್ಳಲಿವೆ. ಎಲ್ಲರಿಗೂ ಈ ಶೋಭಾಯಾತ್ರೆ ವೀಕ್ಷಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಮೆರವಣಿಗೆಯ ಅವಧಿಯನ್ನು 16 ಗಂಟೆಯಿಂದ 12 ಗಂಟೆಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅ.19ರಂದು ಸಂಜೆ 4 ಗಂಟೆಗೆ ಆರಂಭವಾಗುವ ಶೋಭಾಯಾತ್ರೆ ಅ.20ರಂದು ಬೆಳಗ್ಗೆ 4 ಗಂಟೆಗೆ ಸಮಾಪನ ಗೊಳಿಸುವ ಉದ್ದೇಶ ಇದೆ ಎಂದು ಹೇಳಿದರು.
ಪೋಲಿಸ್ ಇಲಾಖೆಯ ಸಹಕಾರ: ದಸರಾ ಮೆರವಣಿಗೆ ಸುಗಮವಾಗಿ ಸಾಗಲು ಅನುಕೂಲವಾಗುವಂತೆ ಪ್ರತಿಯೊಂದು ಟ್ಯಾಬ್ಲೋ ತಂಡಕ್ಕೆ ಒಬ್ಬರು ಎಎಸ್ಸೈ, 4 ಕಾನ್ ಸ್ಟೇಬಲ್ ಗಳನ್ನು ನಿಯೋಜಿಸಲಾಗುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಲ್ಲದೆ ಪ್ರತೀ ತಂಡದಲ್ಲಿ ಇಬ್ಬರನ್ನು ಸಮನ್ವಯಕಾರರನ್ನಾಗಿ ನೇಮಿಸಲಾಗುವುದು. ಅವರು ಆಡಳಿತ ಮಂಡಳಿ, ಶೋಭಾಯಾತ್ರೆಯ ಮೇಲ್ವಿಚಾರಣಾ ಸಮಿತಿ, ಪೊಲೀಸರು ನೀಡಿದ ಸೂಚನೆ ಪಾಲಿಸಿ ಟ್ಯಾಬ್ಲೋವನ್ನು ಮುನ್ನಡೆಸಲು ಸಹಕರಿಸಲಿದ್ದಾರೆ ಎಂದರು.
ಇದೇ ವೇಳೆ ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ, ಚಿನ್ನದ ಪದಕ ಪಡೆದ ಕ್ರೀಡಾಪಟುಗಳಾದ ಗುರುರಾಜ್ ಪೂಜಾರಿ, ಎಂ.ಆರ್.ಪೂವಮ್ಮ, ಪಂಚಮಿ, ಜಗದೀಶ್, ಪ್ರದೀಪ್ ಆಚಾರ್ಯ ಮೊದಲಾದ ಹತ್ತು ಮಂದಿಗೆ ಚಿನ್ನದ ಪದಕದ ಪುರಸ್ಕಾರದೊಂದಿಗೆ ಶ್ರೀ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ಧನ ಪೂಜಾರಿ ಸನ್ಮಾನಿಸಲಿರುವರು.
ಅ.18ರಂದು ಸಂಜೆ 6ಗಂಟೆಗೆ ಗೋಕರ್ಣನಾಥ ಆರೋಗ್ಯ ಕಾರ್ಡ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಪದ್ಮರಾಜ್ ಆರ್. ಹೇಳಿದರು.
Click this button or press Ctrl+G to toggle between Kannada and English