ಮಂಗಳೂರಿನ ದಸರಾ ವೈಭವ: ಕರಾವಳಿಯಾದ್ಯಂತ ಹುಲಿ ವೇಷಧಾರಿಗಳ ಭರ್ಜರಿ ಕುಣಿತ

3:18 PM, Friday, October 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

huliveshaಮಂಗಳೂರು: ದಸರಾ ಎಂದರೆ ನಮಗೆ ನೆನಪಿಗೆ ಬರುವುದು ನಾನಾ ಬಗೆಯ ವೇಷಗಳು. ಅದರಲ್ಲೂ ದಸರಾ ಹುಲಿಗಳೆಂದರೆ ನೋಡುಗರಿಗೆ ಅದರಲ್ಲೂ ಮಕ್ಕಳಿಗೆ ಸಂಭ್ರಮವೋ ಸಂಭ್ರಮ.

ದಿವಂಗತ ಬಿ ಕೃಷ್ಣಪ್ಪ 1928 ರಲ್ಲಿ ಬಜಿಲಕೇರಿಯಲ್ಲಿ ಆರಂಭಿಸಿದ ಹುಲಿ ವೇಷಕ್ಕೆ ಈಗ 90 ವರ್ಷ . ಅವರ ನಂತರ ಅವರ ಮಗ ಕಮಲಾಕ್ಷ ಕೇಸರಿ ಪ್ರೆಂಡ್ಸ್ ಹೆಸರಿನಲ್ಲಿ ಸುಮಾರು ಐವತ್ತರಿಂದ ಅರವತ್ತು ಜನ ಸದಸ್ಯರೊಂದಿಗೆ ತಂಡವನ್ನು ನಡೆಸಿಕೊಂಡು ಬಂದಿದ್ದಾರೆ.

ಹುಲಿವೇಷದಿಂದಲೇ ಮಂಗಳೂರಿನ ದಸರಾ ವೈಭವ ಕಳೆಗಟ್ಟುತ್ತದೆ ಎಂದರೆ ತಪ್ಪಿಲ್ಲ. ನವರಾತ್ರಿಯ ಆರಂಭದಿಂದ ಮೊದಲ್ಗೊಂಡು ತಾಸೆ , ಡೋಲು ಹಾಗೂ ವಾದ್ಯದ ವಿಶೇಷ ಮೇಳದೊಂದಿಗೆ ಹುಲಿವೇಷಧಾರಿಗಳು ಕರಾವಳಿಯ ಎಲ್ಲೆಡೆ ಕಾಣಸಿಗುತ್ತಾರೆ.

ವಾದ್ಯ, ತಮಟೆಯ ವಿಶೇಷ ವಾದನಕ್ಕೆ ತಕ್ಕಂತೆ ಹುಲಿವೇಷಧಾರಿ ಕುಣಿಯುತ್ತಾನೆ. ದಾರಿಯಲ್ಲಿ ಹೋಗುವ ಬರುವ ಜನರು ಹುಲಿಕುಣಿತ ನೋಡಲು ಸುತ್ತುಗಟ್ಟುವಂತೆ ಮಾಡುತ್ತಾನೆ. ಅಷ್ಟಕ್ಕೂ ಆತನಿಗೆ ಹುಲಿವೇಷದ ಹೆಜ್ಜೆಯ ಲಯಗಾರಿಕೆ ತಿಳಿದಿರಬೇಕು. ಇಲ್ಲದೆ ಹೋದರೆ ಹುಲಿ ಕುಣಿತಕ್ಕೆ ಕಳೆ ಬರುವುದಿಲ್ಲ.

ತಾಸೆಯ(ತಮಟೆ) ಬಡಿತಕ್ಕೆ ಸರಿಯಾಗಿ ಹೆಜ್ಜೆ ಇರಿಸುತ್ತಾ, ತಲೆಯನ್ನು ಮೆಲ್ಲಗೆ ಅಲ್ಲಾಡಿಸಿ, ಕೆಲವೊಂದು ವಿಶೇಷ ನರ್ತನ ಮಾಡುತ್ತಾ, ಪಲ್ಟಿ ಹೊಡೆಯುತ್ತಾ ರಂಜನೆ ಮಾಡುವ ಹುಲಿ ವೇಷಧಾರಿಗಳು, ವಾದ್ಯಗಳ ಬಡಿತ ಹೆಚ್ಚಾದಂತೆ ಕುಣಿತವನ್ನು ತೀವ್ರಗೊಳಿಸಿ ನೆರೆದಿರುವ ಜನರನ್ನು ರಂಜಿಸುತ್ತಾರೆ.

ಹುಲಿವೇಷದ ವಿಶೇಷ ನರ್ತನದಲ್ಲಿ ತಾಯಿ ಹುಲಿ ಹಾಗೂ ಮರಿ ಹುಲಿಗಳ ನರ್ತನವೂ ಒಂದು. ಇದು ದೇವಿ ಮತ್ತು ಭಕ್ತರ ನಡುವಿನ ವಿಶೇಷ ಮಾತೃ ವಾತ್ಸಲ್ಯದ ಸಂಕೇತ ಎಂದು ಹಿರಿಯ ಹುಲಿವೇಷಧಾರಿ ಹೇಳುತ್ತಾರೆ.

ಅಲ್ಲದೆ ಮರಿಹುಲಿಗಳ ಆಟ, ತಾಯಿ ಹುಲಿ ಹಾಗೂ ಮರಿಹುಲಿಗಳ ಸಂಬಂಧ, ದೊಡ್ಡ ಹುಲಿಗಳ ಕಾದಾಟ ಎಲ್ಲವನ್ನೂ ಹುಲಿವೇಷಧಾರಿಗಳು ನರ್ತನದಲ್ಲಿ ತೋರಿಸುತ್ತಾರೆ.

ಹುಲಿವೇಷಗಾರರಿಗೆ ಕೆಂಪು ಮಿಶ್ರಿತ ಹಳದಿ ಬಣ್ಣದ ಪೇಂಟ್ ಅನ್ನು ಇಡೀ ಮೈಗೆ, ಮುಖ ಸಮೇತ ಹಚ್ಚಲಾಗುತ್ತದೆ. ನಂತರ ಕಪ್ಪು ಪಟ್ಟೆ ಎಳೆಯಲಾಗುತ್ತದೆ. ತಲೆಗೆ ವಿಶೇಷ ಟೊಪ್ಪಿಗೆಯನ್ನು ಇಡಲಾಗುತ್ತದೆ. ಇದರಿಂದ ವೇಷಧಾರಿ ಹುಲಿಯಂತೆ ಭಾಸವಾಗುತ್ತಾನೆ.

ಇತ್ತೀಚೆಗೆ ಕಪ್ಪು ಬಣ್ಣದ ಬಿಳಿಚುಕ್ಕೆಯುಳ್ಳ, ಚಿರತೆಯನ್ನು ಹೋಲುವ ಹುಲಿವೇಷಗಳು ಕಾಣಸಿಗುತ್ತವೆ. ಈ ರೀತಿ ಬಣ್ಣ ಹಾಕಲು ಆತ ನುರಿತ ಕಲಾವಿದ ಆಗಿರಬೇಕು. ಒಂದು ಹುಲಿವೇಷ ತಂಡದಲ್ಲಿ ಕನಿಷ್ಠ 10 ರಿಂದ 12 ಮಂದಿ ಇರುತ್ತಾರೆ. ಹೆಚ್ಚೆಂದರೆ ಸುಮಾರು 35 ಮಂದಿವರೆಗೂ ಹುಲಿವೇಷಧಾರಿಗಳು ಇರುತ್ತಾರೆ. ಒಬ್ಬನಿಗೆ ವೇಷ ಹಾಕಲು ಕನಿಷ್ಠ 3 ತಾಸು ಬೇಕಾಗುತ್ತದೆ ಎನ್ನುವುದು ಹುಲಿವೇಷದ ಪೇಂಟ್ ಹಾಕುವ ಕಲಾವಿದರ ಅಭಿಪ್ರಾಯ.

ಹಿಂದೆ ಆಯಿಲ್ ಪೇಂಟ್ ಬಳಸುತ್ತಿದ್ದರು. ಇದರಿಂದ ಸುಮಾರು ಹತ್ತು ದಿನಗಳ ನಡೆಯುವ ದಸರಾ ಪರ್ಯಂತ ಬಣ್ಣ ಮಾಸದೆ ಹಾಗೇ ಇರುತ್ತಿತ್ತು. ಆದರೆ ಅದು ವಿಪರೀತ ಉರಿ ಇರುವುದರಿಂದ ಹತ್ತು ದಿನಗಳ ಕಾಲ ವೇಷಧಾರಿ ಈ ಸಂಕಟವನ್ನು ಅನುಭವಿಸಬೇಕಿತ್ತು. ಅಲ್ಲದೆ ಆತ ಉತ್ಸವಗಳ ಹತ್ತು ದಿನಗಳ ಪರ್ಯಂತರ ಸ್ನಾನ ಮಾಡದೆ ಕೊನೆಯ ದಿನ ದೇವರ ಅವಭೃತ ಸ್ನಾನ ಆದ ಮೇಲೆ ಬಣ್ಣ ಕಳಚಿ ಸ್ನಾನ ಮಾಡಬೇಕೆಂಬ ಸಂಪ್ರದಾಯವಿತ್ತಂತೆ. ಯಾಕೆಂದರೆ ಹಿಂದೆ ಯಾವುದಾದರೂ ಕಾಯಿಲೆ ಬಂದ ಸಂದರ್ಭ ರೋಗ ಶಮನವಾಗಲು ಹುಲಿವೇಷ ಹಾಕುತ್ತೇವೆ ಎಂದು ಹರಕೆ ಕಟ್ಟಿಕೊಳ್ಳುತ್ತಿದ್ದರಂತೆ. ಆದರೆ ಇತ್ತೀಚೆಗೆ ಆಯಿಲ್ ಪೇಂಟ್ ಬದಲು ವಾಟರ್ ಕಲರ್ ಬಳಸುತ್ತಾರೆ. ಹಾಗಾಗಿ ಬೆವರಿಗೆ ಅತಿ ಬೇಗ ಬಣ್ಣ ಮಾಸುತ್ತದೆ.

ಒಟ್ಟಿನಲ್ಲಿ ಇತ್ತೀಚೆಗೆ ಯವಕರ ಉತ್ಸಾಹದಿಂದಾಗಿ ಕರಾವಳಿಯ ಸಂಪ್ರದಾಯ ಹುಲಿಕಣಿತ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ನವರಾತ್ರಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

hulivesha-2

hulivesha-3

hulivesha-4

hulivesha-5

hulivesha-6

hulivesha-7

hulivesha-8

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English