ಬೆಂಗಳೂರು : ಬಿಜೆಪಿ ಹಿರಿಯ ಮುಖಂಡ, ಸಜ್ಜನ, ಅಜಾತಶತ್ರು, ರಾಜಕಾರಣಿ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ (71) ಅವರು ಫೆ.14ರಂದು ಹಠಾತ್ತಾಗಿ ಅಸ್ವಸ್ಥರಾಗಿ ಹೃದಯಾಘಾತದಿಂದ ನಗರದ ಮಲ್ಲಿಗೆ ನರ್ಸಿಂಗ್ ಹೋಂನಲ್ಲಿ ಕೊನೆಯುಸಿರೆಳೆದರು.
ನೃಪತುಂಗ ರಸ್ತೆಯಲ್ಲಿರುವ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸುತ್ತಿದ್ದಾಗ ವೇದಿಕೆಯಲ್ಲಿಯೇ ಅವರು ಕುಸಿದುಬಿದ್ದಿದ್ದರು. ಅವರನ್ನು ಕೂಡಲೆ ಕ್ರೆಸೆಂಟ್ ರಸ್ತೆಯಲ್ಲಿರುವ ಮಲ್ಲಿಗೆ ನರ್ಸಿಂಗ್ ಹೋಂಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಚಾರ್ಯ ಅವರು ತೀರಿಕೊಂಡಿದ್ದಾರೆ.
ವಿ.ಎಸ್. ಆಚಾರ್ಯ ಅವರು ಇಂದು ಮಧ್ಯಾಹ್ನವೇ ಮಂಗಳೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಮರಳಿದ್ದರು. ಅಲ್ಲಿಂದ ನೇರವಾಗಿ ಅವರು ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿ ವೇದಿಕೆ ಏರುವಾಗ ಕುಸಿದುಬಿದ್ದಿದ್ದಾರೆ. ಕೊನೆಗೆ ಮಧ್ಯಾಹ್ನ 1.15ರ ಸುಮಾರಿಗೆ ಅವರು ಅಸುನೀಗಿದರು. ಅವರ ಪಾರ್ಥೀವ ಶರೀರವನ್ನು ರೇಸ್‌ಕೋರ್ಸ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಇಡಲಾಗಿತ್ತು. ಅಲ್ಲಿ ಅವರಿಗೆ ಸಲಕ ಸರಕಾರಿ ವಂದನೆ ಸಲ್ಲಿಸಲಾಯಿತು. ಎಲ್ಲ ರಾಜಕಾರಣಿಗಳು ಬಂದು ಅಂತಿಮ ನಮನ ಸಲ್ಲಿಸಿದರು.
ಆಚಾರ್ಯ ಅವರ ಸಾವು ಬಿಜೆಪಿ ಪಾಲಿಗೆ ತುಂಬಲಾರದ ನಷ್ಟ. ಅವರು ಎಲ್ಲ ರಾಜಕಾರಣಿಗಳಿಗೆ ಮಾರ್ಗದರ್ಶಿಗಳಾಗಿದ್ದರು. ಅವರ ಸ್ಥಾನವನ್ನು ತುಂಬುವುದು ಕಷ್ಟಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಲ್ಲಿಗೆ ಆಸ್ಪತ್ರೆಗೆ ಧಾವಿಸಿದ್ದಾರೆ.
1939ರಲ್ಲಿ ಕಟ್ಟೆ ಶ್ರೀನಿವಾಸ್-ಕೃಷ್ಣವೇಣಿ ಅಮ್ಮ ದಂಪತಿಗಳ ಪುತ್ರನಾಗಿ ಜನಿಸಿದ್ದ ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರು 1959ರಲ್ಲಿ ವೈದ್ಯಕೀಯ ಪದವಿ ಪಡೆದುಕೊಂಡಿದ್ದರು. 1968ರಲ್ಲಿ ಪ್ರಥಮ ಬಾರಿಗೆ ಉಡುಪಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು.
ತದನಂತರ 1974ರಲ್ಲಿ ಭಾರತೀಯ ಜನತಾ ಸಂಘದ ಜಿಲ್ಲಾಧ್ಯಕ್ಷರಾಗಿದ್ದರು. 1977ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹೀಗೆ ಹಂತ, ಹಂತವಾಗಿ ರಾಜಕೀಯವಾಗಿ ಮೇಲೇರಿದ್ದ ವಿ.ಎಸ್.ಆಚಾರ್ಯ ಬಿಜೆಪಿ ಸರ್ಕಾರದಲ್ಲಿ ಮುಜರಾಯಿ, ಗೃಹ ಹಾಗೂ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಸರಳ, ಸಜ್ಜನಿಕೆಗೆ ಹೆಸರುವಾಸಿಯಾಗಿದ್ದ ವಿ.ಎಸ್.ಆಚಾರ್ಯ (71) ಪತ್ನಿ ಶಾಂತ.ವಿ.ಆಚಾರ್ಯ, ನಾಲ್ವರು ಗಂಡು ಮಕ್ಕಳು, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಜೆ 5ರಿಂದ 8ರವರೆಗೆ ಆಚಾರ್ಯ ಪಾರ್ಥಿವ ಶರೀರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ರಾತ್ರಿ 10ಗಂಟೆಗೆ ಉಡುಪಿ ಬೀಡಿನ ಗುಡ್ಡೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆಚಾರ್ಯ ಅವರ ಗೌರವಾರ್ಥವಾಗಿ ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆ ನಡೆಸಲು ರಾಜ್ಯ ಸರಕಾರ ನಿರ್ಣಯಿಸಿದೆ. ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಎರಡು ದಿನ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಲಾಗಿದೆ. ಉಡುಪಿಯ ಡಿಸಿ ಕಚೇರಿ ‘ರಜತಾದ್ರಿ’ಯಲ್ಲಿ ಸಂಜೆ 5ರಿಂದ 8ರವರೆಗೆ ಸಾರ್ವಜನಿಕರಿಗೆ ಆಚಾರ್ಯ ಅವರ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ.
ಕ್ರುಪೆಃ ದಟ್ಸ್ ಕನ್ನಡ/ವೆಬ್ ದುನಿಯಾ
Click this button or press Ctrl+G to toggle between Kannada and English