ಮಂಗಳೂರು: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಕಸಾಯಿಖಾನೆ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಅನುದಾನ ನೀಡಿಕೆ ವಿಚಾರ ಸಂಬಂಧಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು.
ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಸಾಯಿಖಾನೆ ಅಭಿವೃದ್ಧಿ ಪಡಿಸುವ ಬಗ್ಗೆ ಪಾಲಿಕೆಯಲ್ಲಿ ಯಾವುದೇ ಚರ್ಚೆ ಮಾಡದೆ ನೇರವಾಗಿ ಸ್ಮಾರ್ಟ್ ಸಿಟಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿರುವುದರ ವಿರುದ್ಧ ಪ್ರತಿಪಕ್ಷದಲ್ಲಿರುವ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಸಭೆಗೆ ಉತ್ತರಿಸಿದ ಮನಪಾ ಮೇಯರ್ ಭಾಸ್ಕರ್ ಮೊಯ್ಲಿ, ಸದ್ಯ ಕುದ್ರೋಳಿಯಲ್ಲಿರುವ ಕಸಾಯಿಖಾನೆಯನ್ನು ಅಭಿವೃದ್ಧಿ ಪಡಿಸೋಣ. ಮುಂದೆ ಕಸಾಯಿಖಾನೆಗೆ ಬೇಕಾದ ಜಾಗ ಸಿಕ್ಕಿದರೆ ಅಲ್ಲಿಗೆ ಅದನ್ನು ಸ್ಥಳಾಂತರಿಸೋಣ ಎಂದಾಗ ಸದಸ್ಯರು ಭಾರಿ ಗದ್ದಲವೆಬ್ಬಿಸಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಸುಮಾರು ಒಂದೂವರೆ ಗಂಟೆಗಳ ಕಾಲ ಪಾಲಿಕೆ ಸಭೆಯಲ್ಲಿ ಕಸಾಯಿಖಾನೆ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಪಾಲಿಕೆ ಸಭೆಯಲ್ಲಿ ಸುರತ್ಕಲ್ ಎನ್ಐಟಿಕೆಯಲ್ಲಿ ಇರುವ ಟೋಲ್ ಗೇಟ್ ಮುಚ್ಚಬೇಕೆಂಬ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಆಡಳಿತ ಪಕ್ಷದ ಸದಸ್ಯ ಪುರುಷೋತ್ತಮ ಪುರ ಆಗ್ರಹಿಸಿದರು. ಇದಕ್ಕೆ ಸಿಪಿಎಂ ಪಕ್ಷದ ಸದಸ್ಯ ದಯಾನಂದ ಶೆಟ್ಟಿ ಧ್ವನಿಗೂಡಿಸಿದರು .ಇದಕ್ಕೆ ಪ್ರತಿಪಕ್ಷದ ಸದಸ್ಯರು ತಮ್ಮ ಸಹಮತವಿದೆ ಎಂದು ತಿಳಿಸಿದ ಮೇರೆಗೆ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಮುಂದೆ ಲೋಕಸಭಾ ಸದಸ್ಯರು ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಜೊತೆ ಪಾಲಿಕೆ ಸದಸ್ಯರ ಸಭೆಯನ್ನು ಕರೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
Click this button or press Ctrl+G to toggle between Kannada and English