ಮಂಗಳೂರು : ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ವಿನಾಃ ಕಾರಣ ಕೆಲಸದಿಂದ ವಜಾ ಮಾಡಿದ್ದು,ಅವರ ಮರು ನೇಮಕವಾಗಬೇಕು,ಹಾಗೂ ಕಾರ್ಮಿಕರಿಗೆ ಸಂಬಳ ನೀಡದೆ ಸತಾಯಿಸುತ್ತಿರುವ ಸಾಯಿ ಸೆಕ್ಯುರಿಟಿ ಸಂಸ್ಥೆ ಹಾಗೂ ಜಿಲ್ಲಾ ಅಧೀಕ್ಷಕರ ಸರ್ವಾಧಿಕಾರಿ ಧೋರಣೆ ಖಂಡಿಸಿ CITU ನೇತ್ರತ್ವದಲ್ಲಿ ಗುತ್ತಿಗೆ ಕಾರ್ಮಿಕರಿಂದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ CITU ದ.ಕ.ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಲೈಸನ್ಸ್ ಪಡೆಯದೆ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ವಹಿಸಿದ ಸಾಯಿ ಸೆಕ್ಯುರಿಟಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದು ಹೇಗೆ..? ಇಲ್ಲಿನ ಗುತ್ತಿಗೆ ಕಾರ್ಮಿಕರನ್ನು ಗುಲಾಮರಂತೆ ದುಡಿಸಿ,ಕಾನೂನುಬದ್ದ ಸವಲತ್ತುಗಳನ್ನು ನೀಡದೆ ವಂಚಿಸುತ್ತಿರುವ ಸಾಯಿ ಸೆಕ್ಯುರಿಟಿ ಸಂಸ್ಥೆ ಒಂದು ಕಡೆಯಾದರೆ,ಮತ್ತೊಂದು ಕಡೆ ಜಿಲ್ಲಾ ಅಧೀಕ್ಷಕರ ಸರ್ವಾಧಿಕಾರಿ ಧೋರಣೆ ಹಾಗೂ ದಬ್ಬಾಳಿಕೆಗಳಿಂದ ಇಲ್ಲಿನ ಕಾರ್ಮಿಕರು ದುಡಿಯಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಮಾತ್ರವಲ್ಲದೆ ಕಾರ್ಮಿಕರ ದುಡಿಮೆಯ ಸಂಬಳವನ್ನು ನೀಡದೆ ಸತಾಯಿಸಲಾಗುತ್ತಿದೆ. ಈ ಬಗ್ಗೆ ಕೂಡಲೇ ಸ್ಪಂದನ ದೊರೆಯದಿದ್ದಲ್ಲಿ ಅನಿರ್ದಿಷ್ಠಾವಧಿ ಧರಣಿ,ಉಸ್ತುವಾರಿ ಸಚಿವರಿಗೆ ಘೆರಾವ್ ಮುಂತಾದ ತೀವ್ರ ರೀತಿಯ ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೋರಾಟವ ಬೆಂಬಲ ನೀಡಿದ CITU ನ ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಹಲವಾರು ಹಗರಣ,ಅಕ್ರಮಗಳನ್ನು ಎಳೆಎಳೆಯಾಗಿ ವಿವರಿಸುತ್ತಾ,ಈ ಎಲ್ಲಾ ವಿಷಯಗಳಲ್ಲಿ ಜಿಲ್ಲಾ ಅಧೀಕ್ಷಕರ ಕೈವಾಡವಿದ್ದು,ಸಮಗ್ರ ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿದರು.
ಬಳಿಕ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ,ವೆನ್ಲಾಕ್ ಅಧಿಕಾರಿಗಳನ್ನು ಹಾಗೂ ಸಾಯಿ ಸೆಕ್ಯುರಿಟಿ ಸಂಸ್ಥೆಯ ಸುಪರ್ ವೈಸರನ್ನು ಕರೆಸಿ ಮಾತುಕತೆ ನಡೆಸಿದರು.ಬಾಕಿ ಇರಿಸಿದ ಸಂಬಳವನ್ನು ತುರ್ತಾಗಿ ನೀಡಬೇಕು,ಇಲ್ಲದಿದ್ದಲ್ಲಿ ದಂಡ ಸಮೇತ ವಸೂಲಿ ಮಾಡಲಾಗುವುದು ಎಂದು ತಾಕೀತು ಮಾಡಿದರು.ಕೆಲಸ ನಿರಾಕರಣೆ ಮಾಡಿದ ಕಾರ್ಮಿಕರ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ಕೂಡಲೇ ಸಭೆ ಕರೆಯುವುದಾಗಿ ಭರವಸೆ ನೀಡಿದರು.
ಹೋರಾಟದ ನೇತ್ರತ್ವವನ್ನು ಕಾರ್ಮಿಕ ಮುಖಂಡರಾದ ಹೇಮಾವತಿ, ಸುನೀತಾ, ಶಾಂತ, ಗೀತಾ, ಪ್ರೇಮ, ನಾಗರಾಜ್, ದೀಪಕ್, ಇಮದಾದ್, ಲತೀಫ್, ಪ್ರವೀಣ್, ಕರುಣಾಕರ್ ಮುಂತಾದವರು ವಹಿಸಿದ್ದರು.
Click this button or press Ctrl+G to toggle between Kannada and English