ಮಂಗಳೂರು: ಖಾಸಗಿ ಬಸ್ಸೊಂದು ಹರಿದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕೂಳೂರಿನಲ್ಲಿ ನಡೆದಿದೆ.
ಕೂಳೂರು ನಿವಾಸಿ ಭೋಜ (45) ಮೃತಪಟ್ಟವರು. ಮೃತರು ನಗರದಲ್ಲಿ ಹಲವಾರು ವರ್ಷಗಳಿಂದ ಇಲೆಕ್ಟ್ರಿಶಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮಂಗಳೂರಿನಿಂದ ಸುರತ್ಕಲ್ ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಕೂಳೂರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಭೋಜರವರ ಮೇಲೆಯೇ ಹರಿದು ಹೋಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಗರ ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Click this button or press Ctrl+G to toggle between Kannada and English