ಮಂಗಳೂರು: ದಿಢೀರ್ ನಾಪತ್ತೆಯಾಗಿದ್ದ ಶಕ್ತಿನಗರದ ವಿನಾಯಕ್ ಎಂಬ ಯುವಕನನ್ನು ಕೇರಳದ ಕೊಚ್ಚಿನ್ ಪೊಲೀಸರು ಪತ್ತೆ ಮಾಡಿ ಉರ್ವ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಮಾಜಿ ಪಿಎಸ್ಐ ಮದನ್ ಮೇಲಿದ್ದ ಅನುಮಾನಕ್ಕೆ ತೆರೆ ಬಿದ್ದಿದೆ.
ಶಕ್ತಿನಗರದ ನಿವಾಸಿ ಆಟೋ ಚಾಲಕ ಶಿವಕುಮಾರ್-ಸಾಕಮ್ಮ ದಂಪತಿ ಪುತ್ರ ವಿನಾಯಕ ನ.8ರಂದು ಖಾಸಗಿ ಅಪಾರ್ಟ್‌ಮೆಂಟ್‌ನಿಂದ ನಾಪತ್ತೆಯಾಗಿದ್ದ. ವಿನಾಯಕ್ ನಾಪತ್ತೆ ಆಗಿರುವುದನ್ನು ನ.15ರಂದು ಮದನ್ ಕರೆ ಮಾಡಿ ಆತನ ಪೋಷಕರಿಗೆ ತಿಳಿಸಿದ್ದರು. ಬಳಿಕ ಹೆತ್ತವರು ಉರ್ವ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪುತ್ರ ನಾಪತ್ತೆಯಾಗಲು ಮದನ್ ಪಾತ್ರವಿದ್ದೂ ಪೊಲೀಸರು ಮದನ್ ಪರ ಕೆಲಸ ಮಾಡುತ್ತಿದ್ದರೆಂದು ಅನುಮಾನಗೊಂಡು ಹೈಕೋರ್ಟ್‌ನಲ್ಲಿ ಪುತ್ರನನ್ನು ಹುಡುಕಿ ಕೊಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ನಾಪತ್ತೆಯಾಗಿರುವ ವಿನಾಯಕನನ್ನು ಪತ್ತೆ ಹಚ್ಚಿ ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಆದೇಶಿಸಿತ್ತು.
ಉರ್ವ ಪೊಲೀಸರು ಡಿ.3ರಂದು(ಸೋಮವಾರ) ಹೈಕೋರ್ಟ್‌ನಲ್ಲಿ ವಿನಾಯಕನನ್ನು ಹಾಜರುಪಡಿಸಿ, ಹೆತ್ತವರ ವಶಕ್ಕೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English