ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

3:16 PM, Wednesday, March 28th, 2012
Share
1 Star2 Stars3 Stars4 Stars5 Stars
(4 rating, 4 votes)
Loading...

World Theatre Day

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳವಾರ ಅಕಾಡೆಮಿ ಚಾವಡಿಯಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ-ತುಳು ರಂಗಭೂಮಿಯ ಬೆಳವಣಿಗೆ ಕುರಿತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್‌ ವಹಿಸಿದ್ದರು. ಕಲಾವಿದರು ರಾತ್ರಿಯಿಡೀ ನಿದ್ದೆಗೆಟ್ಟು ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಮನರಂಜಿಸಿ ತಮ್ಮ ಪ್ರತಿಭೆಗೆ ಸರಿಯಾದ ಮಾನ್ಯತೆ ದೊರೆಯದ ಕಾಲವೊಂದಿತ್ತು. ಈಗ ಅದು ಬದಲಾಗಿದೆ ರಂಗಭೂಮಿಯಲ್ಲಿ ಹಲವಾರು ಬದಲಾವಣೆಗಳಾಗಿವೆ, ಕಲಾವಿದರಿಗೆ ಪ್ರತಿಭೆಗೆ ತಕ್ಕ ಪ್ರಾಧಾನ್ಯತೆ ಸಿಕ್ಕುತ್ತಿದೆ ಎಂದು ಅವರು ತನ್ನ ಅಧ್ಯಕ್ಷ ಬಾಷಣದಲ್ಲಿ ಹೇಳಿದರು.

ಹಿಂದೆ ನಾಟಕದಲ್ಲಿ ಅಭಿನಯಿಸಲು ಯುವತಿಯರು ಹಿಂಜರಿಯುತ್ತಿದ್ದರು. ಹುಡುಗಿಯರ ಪಾತ್ರವನ್ನು ಹುಡುಗರೇ ಧ್ವನಿ ಬದಲಾಯಿಸಿ ಮಾಡಬೇಕಿತ್ತು. ಈಗ ರಂಗಭೂಮಿಯಲ್ಲಿ ಯುವತಿಯರು ಹೆಚ್ಚು ಆಸಕ್ತಿ ತೋರಿಸುತ್ತಿರುವುದು. ರಂಗಭೂಮಿಯ ಬೆಳವಣಿಗೆಗೆ ಇನ್ನಷ್ಟು ಸಹಕಾರಿಯಾಗಿದೆ ಎಂದರು. ಇದರಿಂದಾಗಿ ಹೆಚ್ಚು ಹೆಚ್ಚು ನಾಟಕ ತಂಡಗಳ ಉದಯವಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶಗಳೂ ಸಿಕ್ಕುತ್ತಿವೆ ಎಂದರು.

World Theatre Day

ರಂಗಭೂಮಿ ಕಲಾವಿದ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಮಾತನಾಡಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಸೇರಿದಂತೆ ಎಲ್ಲರನ್ನೂ ಒಟ್ಟು ಸೇರಿಸಿ ಕೇಂದ್ರದ ಮುಂದೆ ಒತ್ತಡ ತರುವ ಗಂಭೀರ ಚಿಂತನೆಯನ್ನು ತುಳು ಸಾಹಿತ್ಯ ಅಕಾಡೆಮಿ ಮಾಡಬೇಕು ಎಂದು ವಿನಂತಿಸಿದರು.

ತುಳು ರಂಗಭೂಮಿ ಪ್ರಸ್ತುತ ಅತ್ಯಂತ ಉತ್ತಮ ಸ್ಥಿತಿಯಲ್ಲಿದೆ. ನಿಂತ ನೀರಾಗಿದ್ದ ತುಳು ಸಿನೆಮಾವು ಇಂದು ದಾಖಲೆಯ ಹಂತಕ್ಕೆ ತಲುಪಿದೆ. ಹೊಸ ಹೊಸ ತುಳು ಸಿನೆಮಾಗಳು ಪ್ರದರ್ಶನ ಕಾಣಲು ತುದಿಗಾಲಲ್ಲಿ ನಿಂತಿವೆ. ಹೀಗಾಗಿ ತುಳು ಭಾಷೆ ಸಂವಿಧಾನದ ಮಾನ್ಯತೆಯನ್ನು ಪಡೆಯಲು ಅಕಾಡೆಮಿ ಪರಿಶ್ರಮ ಪಡಬೇಕಿದೆ. ಇದಕ್ಕೆ ಕಲಾವಿದರ ಬಳಗದ ಸಂಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ಆರ್‌.ಕೆ. ಮಂಗಳೂರು ಅವರಿಗೆ ಚಾವಡಿ ಸಮ್ಮಾನ ಮತ್ತು ಒರಿಯರ್ದೊರಿ ಅಸಲ್‌ ಸಿನೆಮಾದ ಬೆಳ್ಳಿಹಬ್ಬದ ಸಾಧನೆ ಪರಿಗಣಿಸಿ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಅವರಿಗೆ ‘ತುಳುನಾಡ ಬಿರ್ಸೆ’ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು.

ರಂಗಭೂಮಿ ಕಲಾವಿದರಾದ ಆರ್‌.ಕೆ. ಉಳ್ಳಾಲ, ಕೆ.ವಿ. ಶೆಟ್ಟಿ ಕದ್ರಿ, ಸಂಜೀವ ಎಸ್‌. ಅಡ್ಯಾರ್‌, ರೋಹಿಣಿ ಜಗರಾಮ್‌, ಜಗದೀಶ್‌ ಕೆಂಚನಕೆರೆ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಮತ್ತು ಲಕುಮಿ ತಂಡದ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ ಡಿ. ಶೆಟ್ಟಿ, ಕಾರ್ಯಕ್ರಮ ಸಂಚಾಲಕ ದಾಮೋದರ ಬಿ. ಬಂಗೇರ ಮುಂತಾದವರು ಉಪಸ್ಥಿತರಿದ್ದರು.

ರಿಜಿಸ್ಟ್ರಾರ್‌ ಚಂದ್ರಹಾಸ್‌ ರೈ ಬಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English