ಪೊಳಲಿ: ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಗ್ರಾಮದಲ್ಲಿ 16 ಗ್ರಾಮಗಳಿಗೆ ಸಂಬಂಧಪಟ್ಟಂತೆ ಸಾವಿರ ಸೀಮೆ ವ್ಯಾಪ್ತಿಯ ಐತಿಹಾಸಿಕ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವು ರೂ 19 ಕೋಟಿ ವೆಚ್ಚದಲ್ಲಿ ಸಂಪೂರ್ಣ ಪುನರ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದರಿಂದಾಗಿ ಮಾ. 4 ರಿಂದ 13 ರತನಕ ಇಲ್ಲಿನ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಾಗೂ ಮಾ.14ರಿಂದ ಒಂದು ತಿಂಗಳು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗುರುವಾರ ಮಧ್ಯಾಹ್ನ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಇಲ್ಲಿನ ಆಡಳಿತ ಮಂಡಳಿಯಲ್ಲಿ ಅಮ್ಮುಂಜೆಗುತ್ತು, ಉಳಿಪಾಡಿಗುತ್ತು, ಚೇರ ಮನೆತನ ಹಾಗೂ ಭಟ್ರ ಮನೆತನದವರು ಪವಿತ್ರಪಾಣಿ ಮತ್ತು ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 1700 ವರ್ಷಗಳ ಹಿನ್ನೆಲೆ ಹೊಂದಿರುವ ದೇವಾಲಯವನ್ನು ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಂತೆ ಪುನರ್ ನಿರ್ಮಿಸಲಾಗುತ್ತಿದ್ದು, ಸುಬ್ರಹ್ಮಣ್ಯ ತಂತ್ರಿ ಮಾರ್ಗದರ್ಶನದಲ್ಲಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಮತ್ತಿತರ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.
ಅಭಿವೃದ್ಧಿ ಕಾಮಗಾರಿ:
ರೂ 75ಲಕ್ಷ ವೆಚ್ಚದಲ್ಲಿ ಶ್ರೀ ದುರ್ಗಾಪರಮೇಶ್ವರಿ ಗುಡಿ, ರೂ 3.25ಕೋಟಿ ವೆಚ್ಚದಲ್ಲಿ ಶ್ರೀ ರಾಜರಾಜೇಶ್ವರಿ ಪ್ರಧಾನ ಗರ್ಭಗುಡಿ, ರೂ.5ಕೋಟಿ ವೆಚ್ಚದಲ್ಲಿ ಒಳಾಂಗಣ ಸುತ್ತುಪೌಳಿ, ರೂ 25 ಲಕ್ಷ ವೆಚ್ಚದಲ್ಲಿ ಶ್ರೀ ಕ್ಷೇತ್ರಪಾಲ ಸನ್ನಿಧಿ (ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ), ರೂ 1ಕೋಟಿ ವೆಚ್ಚದಲ್ಲಿ ನೂತನ ಧ್ವಜಸ್ತಂಭ, ರೂ 25ಲಕ್ಷ ವೆಚ್ಚದಲ್ಲಿ ವಸಂತ ಮಂಟಪ, ರೂ 50ಲಕ್ಷ ವೆಚ್ಚದಲ್ಲಿ ಶ್ರೀ ಸತ್ಯನಾರಾಯಣ ಮತ್ತು ಶ್ರೀ ದೇವಳ ಕಚೇರಿ ನಿರ್ಮಾಣ, ರೂ 28ಲಕ್ಷ ವೆಚ್ಚದಲ್ಲಿ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನ ಗುಡಿ, ರೂ 60ಲಕ್ಷ ವೆಚ್ಚದಲ್ಲಿ ಹೊರಾಂಗಣ ಹಾಸುಕಲ್ಲು, ರೂ 4ಲಕ್ಷ ವೆಚ್ಚದಲ್ಲಿ ಮಹಾಬಲಿ ಪೀಠ, ರೂ 70ಲಕ್ಷ ವೆಚ್ಚದಲ್ಲಿ ಅಗ್ರಸಭಾ, ರೂ 6ಲಕ್ಷ ವೆಚ್ಚದಲ್ಲಿ ಲಾಕರ್ ಮತ್ತು ಭದ್ರತಾ ಕೊಠಡಿ, ರೂ 35ಲಕ್ಷ ವೆಚ್ಚದಲ್ಲಿ ಒಳಾಂಗಣ ನಡು ಚಪ್ಪರ, ರೂ 4ಲಕ್ಷ ವೆಚ್ಚದಲ್ಲಿ ತೀರ್ಥಬಾವಿ, ರೂ 2ಕೋಟಿ ವೆಚ್ಚದಲ್ಲಿ ಶ್ರೀ ದುರ್ಗಾಪರಮೇಶ್ವರಿ ಗುಡಿ, ಮುಖದ್ವಾರ, ರಾಜರಾಜೇಶ್ವರಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ಭದ್ರಕಾಳಿ ದೇವರ ಬಾಗಿಲು ಮತ್ತು ದಾರಂದಕ್ಕೆ ಬೆಳ್ಳಿ ಹೊದಿಕೆ, ರೂ 42ಲಕ್ಷ ವೆಚ್ಚದಲ್ಲಿ ಶ್ರೀ ದುರ್ಗಾಪರಮೇಶ್ವರಿ, ರಾಜರಾಜೇಶ್ವರಿ ಗರ್ಭಗುಡಿ, ಸುತ್ತುಪೌಳಿ ಮುಗುಳಿ ಮತ್ತು ಪಂಚಲೋಹದ ದ್ವಾರಪಾಲಕಿ ಹಾಗೂ ಅಗ್ರಸಭೆಯ ಕಂಚಿನ ಕಂಬ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಧ್ವಜಸ್ತಂಭ ಮತ್ತು ದೀಪಸ್ತಂಭ ಕೊಡುಗೆ:
ಬಿಲ್ಲವ ಸಮುದಾಯ ವತಿಯಿಂದ ಈಗಾಗಲೇ ನೂತನ ಧ್ವಜಸ್ತಂಭ (ಕೊಡಿಮರ) ಸಮರ್ಪಣೆಯಾಗಿದ್ದು, ಗಾಣಿಗ ಸಮುದಾಯದಿಂದ ಕಂಚಿನ ದೀಪಸ್ತಂಭ ಸಲ್ಲಿಕೆಯಾಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಉಳಿಪಾಡಿಗುತ್ತು ತಾರನಾಥ ಆಳ್ವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅನುವಂಶಿಕ ಮೊಕ್ತೇಶರ ಪ್ರಧಾನ ಅರ್ಚಕ ಮಾಧವ ಭಟ್, ಮೊಕ್ತೇಶರ ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಇದ್ದರು. ಸುಬ್ರಾಯ ಕಾರಂತ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English