ಯುವಕನ ಅಪಹರಣ: ಮಾರಣಾಂತಿಕ ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆ!

10:06 AM, Friday, December 7th, 2018
Share
1 Star2 Stars3 Stars4 Stars5 Stars
(No Ratings Yet)
Loading...

attackedಮಂಗಳೂರು: ಯುವಕನೋರ್ವನನ್ನು ಐವರು ದುಷ್ಕರ್ಮಿಗಳ ಗುಂಪೊಂದು ಅಪಹರಿಸಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತದನಂತರ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ನಗರದ ಫಳ್ನೀರ್ ನಿವಾಸಿ ಶಿಮಾಕ್ ಹಸನ್(22) ಮಾರಣಾಂತಿಕ ಹಲ್ಲೆಗೊಳ ವ್ಯಕ್ತಿ. ಗೌತಮ್, ಲಾಯ್‌ವೆಗರ್, ಅಂಕಿತ್, ಆದಿತ್ಯ ವಾಲ್ಕೆ ಹಲ್ಲೆನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

ಶಿಮಾಕ್ ನಗರದ ಕಾಲೇಜ್ನಲ್ಲಿ ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದು, ನಿನ್ನೆ ಸಂಜೆ 5 ಗಂಟೆಗೆ ನಗರದ ಅತ್ತಾವರ ಸ್ನಾಕೀಸ್ ಎಂಬ ಮಳಿಗೆಯೊಂದರಲ್ಲಿ ಶಿಮಾಕ್ ಹಾಗೂ ಅವರ ಸ್ನೇಹಿತರಾದ ನೌಶಾದ್, ಸೌರವ್ ಕಾಫಿ ಕುಡಿಯುತ್ತಾ ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಶಿಮಾಕ್‌ನ ಕ್ಲಾಸ್‌ಮೇಟ್ ಅಂಕಿತ್, ಸ್ವಲ್ಪ ಕೆಲಸವಿದೆ ಬಾ ಎಂದು ಶಿಮಾಕ್‌ನನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ.

ಅರ್ಧ ಗಂಟೆಯಾದರೂ ಶಿಮಾಕ್ ವಾಪಸಾಗದ ಕಾರಣ ಅವರ ಸ್ನೇಹಿತರು ಮೊಬೆಲ್‌ನ್ನು ಸಂಪರ್ಕಿಸಿದ್ದಾರೆ. ಮೊದಲು ಕರೆಯನ್ನು ಸ್ವೀಕರಿಸಿಲ್ಲ, ಬಳಿಕ ಮತ್ತೊಂದು ಮೊಬೈಲ್‌ನಿಂದ ಪ್ರಯತ್ನಿಸಿದಾಗ ದುಷ್ಕರ್ಮಿಗಳು ಕರೆ ಸ್ವೀಕರಿಸಿ, ‘ಶಿಮಾಕ್‌ನನ್ನು ಮೂಡುಬಿದಿರೆಗೆ ಕರೆದೊಯ್ಯುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಆನಂತರ ರಾತ್ರಿ ವೇಳೆ ದುಷ್ಕರ್ಮಿಗಳು ಕರೆ ಮಾಡಿ, ‘ನಮಗೆ 50 ಸಾವಿರ ರೂ. ಕೊಡಬೇಕು.ಇಲ್ಲದಿದ್ದರೆ ಶಿಮಾಕ್‌ನನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಮತ್ತೆ ಕೆಲವು ಗಂಟೆಗಳ ಬಳಿಕ ಕರೆ ಮಾಡಿ ಆತನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ.

ಕುಟುಂಬಸ್ಥರು 20 ಸಾವಿರ ರೂ. ಕೊಡಲು ಒಪ್ಪಿದ್ದಾರೆ. ನಗರದ ಕೆಪಿಟಿ ಬಳಿ ದುಷ್ಕರ್ಮಿಗಳಿಗೆ ಬೇಡಿಕೆಯ ಹಣ ತಲುಪಿಸಿದ ತಕ್ಷಣ, ಶಿಮಾಕ್‌ನನ್ನು ಸ್ವಿಫ್ಟ್ ಕಾರಿನಿಂದ ತಳ್ಳಿ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು ಶಿಮಾಕ್‌ನಿಗೆ ಕಬ್ಬಿಣದ ರಾಡ್‌ನಿಂದ ತಲೆಗೆ, ಮುಖಕ್ಕೆ, ಬೆನ್ನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಬೆನ್ನಿನ ಭಾಗ ಪೂರ್ಣ ಗಾಯಗೊಂಡಿದ್ದು, ಸಿಗರೇಟ್‌ನಿಂದ ದೇಹದ ಮೇಲೆ ಸುಟ್ಟಿದ್ದಾರೆ. ಗಾಯಗೊಂಡಿರುವ ಶಿಮಾಕ್ನನ್ನು ನಗರದ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಪಿನಲ್ಲಿದ್ದ ಐವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅಪಹರಣಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ ಅದರಲ್ಲಿದ್ದ ಕಬ್ಬಿಣದ ರಾಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ನಗರದ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English