ಮಂಗಳೂರು: ಬಜಪೆ ಪೊಲೀಸರು ಕಳೆದ ಮಾ. 27 ರಂದು ಸರೋಜಾ ಸಾಲಿಯಾನ್ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಕಳವು ಮಾಡಿದ 10,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ಕೇವಲ ಐದೇ ದಿನಗಳಲ್ಲಿ ಬೇಧಿಸಿರುವ ಪೊಲೀಸರು ಆರೋಪಿಗಳಾದ ಬಜಪೆ ಪಡು ಫೆರಾರ್ ಗ್ರಾಮದ ಚೇತನ್ (24), ಆತನ ಸಹಚರರಾದ ಪಶ್ಚಿಮ ಬಂಗಾಳದ ಕೃಷ್ಣ ಬಿಲಾಯಿ (23) ಮತ್ತು ಬಚ್ಚು ಮಂಡಲ್ (22) ಎಂಬವರನ್ನು ಬಧಿಸಿದ್ದಾರೆ.
ಪಡುಫೆರಾರ್ ಗ್ರಾಮದ ಸುಂಕದಕಟ್ಟೆಯ ಸರೋಜಾ ಸಾಲಿಯಾನ್ ಮತ್ತು ಅವರ ಪುತ್ರಿ ರಚನಾ ಅವರು ಮಾ. 27 ರಂದು ಬೆಳಗ್ಗೆ 11.30 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಸರೋಜಾ ಅವರ ಅಕ್ಕನ ಮಗಳಾದ ಗೀತಾ (25) ಅವರು ಒಬ್ಬಂಟಿಯಾಗಿ ಕೆಲಸ ಮಾಡಿ ಕೊಂಡಿದ್ದ ವೇಳೆ ಈ ದರೋಡೆ ಸಂಭವಿಸಿತ್ತು. ಮನೆಯ ಹಿಂಬಾಗಿಲಿನ ಮೂಲಕ ಒಳ ಪ್ರವೇಶಿಸಿದ ಮೂವರು ಗೀತಾ ಅವರ ಕೈ ಕಾಲುಗಳನ್ನು ಕಟ್ಟಿ ಹಾಕಿ ಬಾಯಿಗೆ ಪ್ಲಾಸ್ಟರ್ ಅಂಟಿಸಿ ರೂಮ್‌ನಲ್ಲಿ ಕೆಡವಿ ಬಳಿಕ ಅಲ್ಮೇರಾದ ಬಾಗಿಲನ್ನು ಬಲವಂತವಾಗಿ ತೆರೆದು ಅದರಲ್ಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಬಂಧಿತರಿಂದ 2 ಮುತ್ತಿನ ಸರಗಳು, 3 ಬಂಗಾರದ ಚೈನ್‌ಗಳು, 1 ಬಂಗಾರದ ಹವಳದ ಸರ, 1 ಬಂಗಾರದ ಲಕ್ಷಿ ¾ ಸರ, 2 ಉಂಗುರ, 2 ಬಂಗಾರದ ಬಳೆ, 2 ಬಂಗಾರದ ಬ್ರೆಸ್‌ಲೆಟ್, 8 ಜತೆ ಬಂಗಾರದ ಕಿವಿಯೋಲೆಗಳು ಸೇರಿದಂತೆ ಒಟ್ಟು 272 ಗ್ರಾಂ ತೂಕದ ಚಿನ್ನಾಭರಣಗಳು, 1 ನೋಕಿಯಾ ಮೊಬೈಲ್‌ನ್ನು ವಶ ಪಡಿಸಿಕೊಳ್ಳಲಾಗಿದೆ, ಇವುಗಳ ಒಟ್ಟು ಮೌಲ್ಯ 10 ಲಕ್ಷ ರೂ. ಗಳಾಗಿವೆ.
ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆಂಧ್ರ ಪ್ರದೇಶದ ವಿಶಾಖ ಪಟ್ಟಣಂ ಪೊಲೀಸರ ಸಹಕಾರ ಪಡೆದು ಮೂವರು ಆರೋಪಿಗಳನ್ನು ರವಿವಾರ (ಎ.1) ಇಲ್ಲಿನ ರೈಲು ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಪಶ್ಚಿಮ ಬಂಗಾಳಕ್ಕೆ ತಲಪುತ್ತಿದ್ದರೆ ಅವರ ಪತ್ತೆ ಕಾರ್ಯ ಕಷ್ಟಸಾಧ್ಯವಿತ್ತು. ಒಂದೊಮ್ಮೆ ಆರೋಪಿಗಳ ಸುಳಿವು ಸಿಕ್ಕಿದರೂ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳುವುದು ಕಷ್ಟವಾಗುತ್ತಿತ್ತು ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಚೇತನ್ ಬಜಪೆಯ ನಿವಾಸಿಯೇ ಆಗಿದ್ದು, ಆತನ ಬಗ್ಗೆ ಊರಿನಲ್ಲಿ ಸಣ್ಣ ಪುಟ್ಟ ದೂರುಗಳಿದ್ದವು. ಆದರೆ ಯಾವುದೇ ಕೇಸು ದಾಖಲಾಗಿರಲಿಲ್ಲ. ಆತ ಈ ಹಿಂದೆ ಮುಂಬಯಿನಲ್ಲಿದ್ದು, ಆಗ ಇನ್ನಿಬ್ಬರು ಆರೋಪಿಗಳ ಪರಿಚಯವಾಗಿತ್ತು ಎಂದ ಅವರು ತನಿಖೆಯ ಹಿತ ದೃಷ್ಟಿಯಿಂದ ಹೆಚ್ಚಿನ ಮಾಹಿತಿಯನ್ನು ಈಗ ನೀಡಲು ಸಾಧ್ಯವಾಗದು ಎಂದರು.
ಪಣಂಬೂರು ಎಸಿಪಿ ಪುಟ್ಟಮಾದಯ್ಯ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜಪೆ ಪೊಲೀಸ್ ಇನ್ಸ್‌ಪೆಕ್ಟರ್ ದಿನಕರ ಶೆಟ್ಟಿ, ಪಿಎಸ್‌ಐ ಅನಂತ ಮುಡೇìಶ್ವರ, ಎಎಸ್‌ಐ ಶಂಕರ ನಾಯಿರಿ, ಸಿಬಂದಿಗಳಾದ ಜಯಾನಂದ, ಸಂತೋಷ್, ಬಸವರಾಜ್, ಸತೀಶ್, ಪಾಂಡೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಿಲಕ್‌ಚಂದ್ರ ಮತ್ತು ಪಿಎಸ್‌ಐ ಭಾರತಿ ಅವರನ್ನೊಳಗೊಂಡ ಪೊಲೀಸ್ ತಂಡ ಈ ಯಶಸ್ವೀ ಕಾರ್ಯಾಚರಣೆ ನಡೆಸಿದ್ದಾರೆ.
ದರೊಡೆಗೆ ಒಳಗಾದ ಮನೆಯ ಮಾಲಕಿ ಸರೋಜಾ ಸಾಲಿಯಾನ್ ಅವರು ಕೇವಲ 5 ದಿನಗಳಲ್ಲಿ ಪ್ರಕರಣವನ್ನು ಬೇಧಿಸಿದ ಪೊಲೀಸ್ ತಂಡಕ್ಕೆ 27,000 ರೂ.ಗಳನ್ನು ಮತ್ತು ಪೊಲೀಸ್ ಅಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು 20 ಸಾವಿರ ರೂ, ಸಹಿತ ಒಟ್ಟು 47,000 ರೂ. ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಡಿ.ಸಿ.ಪಿ. ಎಂ. ಮುತ್ತೂರಾಯ, ಎಸಿಪಿ ಪುಟ್ಟ ಮಾದಯ್ಯ ಇನ್ಸ್‌ಪೆಕ್ಟರ್‌ಗಳಾದ ದಿನಕರ ಶೆಟ್ಟಿ ಮತ್ತು ತಿಲಕ್‌ಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English