ಬಡ ರೋಗಿಗಳಿಗೆ ನೆರವಿನ ಹಸ್ತ: ಮಂಗಳೂರು ಯುವಕನ ಸೇವೆಗೆ ಶ್ಲಾಘನೆ

1:10 PM, Monday, December 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

mangloreಮಂಗಳೂರು: ಬೇರೆಯವರ ಕಷ್ಟವನ್ನು ಕಂಡರೂ ಕಾಣದಂತೆ ಹೋಗುವವರು ಅದೆಷ್ಟೊ, ಅವರ ಬೆನ್ನಿಗೆ ನಿಂತು ಸಹಾಯ ಮಾಡುವ ಕೈಗಳು ಕೆಲವು ಮಾತ್ರ.

ಮಂಗಳೂರು ಮೂಲದ ಯುವಕ ಪುನೀತ್ ಕುಮರಾ್ ಮಡಂತ್ಯಾರ್ ಬಡ ರೋಗಿಗಳ ಪಾಲಿಗೆ ಬಂಧುವಾಗಿ ನಿಂತಿದ್ದು, ಈತನ ನಿಸ್ವಾರ್ಥ ಸೇವೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಪುನೀತ್ ಸಾಮಾಜಿಕ ಕಳಕಳಿಗೆ ಮೊದಲ ಸ್ಪೂರ್ತಿ 2014 ರ ಚುನಾವಣೆಯ ಸಂದರ್ಭ, ಚುನಾವಣೆ ಎಂದರೆ ತಮ್ಮ ಪಕ್ಷಕ್ಕೆ ಮತ ಕೊಡಿ ಎಂದು ಕಾರ್ಯಕರ್ತರು ಮನೆಮನೆಗೆ ತೆರಳುವುದು ಸಾಮಾನ್ಯ. ಈ ಸಂದರ್ಭ ಪಕ್ಷವೊಂದರ ಕಾರ್ಯಕರ್ತರು ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಊರ್ಲ ಎಂಬಲ್ಲಿನ ಕಾಂತಪ್ಪ ಪೂಜಾರಿ ಎಂಬುವರ ಮನೆಗೆ ಮತಯಾಚನೆ ಮಾಡಲು ತೆರಳಿದ್ದ. ಈ ಸಂದರ್ಭ ಅವರಿಗೆ ಆ ಮನೆಯಲ್ಲಿ ಮನಕಲುಕುವಂತಹ ಒಂದು ದೃಶ್ಯ ಕಂಡುಬಂದಿದೆ.

ಶಾಲೆ ಕಾಲೇಜು ಎಂದು ಎಲ್ಲೆಡೆ ಓಡಾಡಬೇಕಾಗಿದ್ದ ಆ ಮನೆಯ ಮಗಳು ನಯನಾ ಕಾಯಿಲೆಯಿಂದ ಮಲಗಿದ್ದು, ಹೊಟ್ಟೆ ಊದಿಕೊಂಡಿತ್ತು, ಕೈಕಾಲು ಬಲಹೀನವಾಗಿ ಇನ್ನೇನು ಸ್ವಲ್ಪದಿನದಲ್ಲೇ ಪ್ರಾಣವೇ ಹೋಗುತ್ತದೆ ಎಂದು ಅನಿಸುತ್ತಿತ್ತು. ಎಲ್ಲರೂ ಇದನ್ನು ನೋಡಿ ಮನೆಯವರಿಗೆ ಒಂದಷ್ಟು ಸಾಂತ್ವನ ಹೇಳಿ ಅಲ್ಲಿಂದ ತೆರಳಿದರು. ಆದರೆ ಆ ತಂಡದಲ್ಲಿದ್ದ ಯುವಕ ಪುನೀತ್ ಕುಮಾರ್ ಮಡಂತ್ಯಾರ್, ಕಾಯಿಲೆಯಿಂದ ಮಲಗಿದ್ದ ನಯನಾಳನ್ನು ಈ ದುಃಸ್ಥಿತಿಯಿಂದ ಪಾರುಮಾಡುವ ಮನಸ್ಸು ಮಾಡಿದರು.

ನಯನಾರಿಗಿರುವ ಕಾಯಿಲೆ ಏನು ಎಂದು ಗೊತ್ತಿರಲಿಲ್ಲ. ಆ ಕ್ಷಣಕ್ಕೆ ಅವರಿಗೆ ನೆನಪಾದದ್ದು ಮಂಗಳೂರಿನ ಎ.ಜೆ. ಶೆಟ್ಟಿ ಆಸ್ಪತ್ರೆ. ಅಲ್ಲಿಗೆ ಕರೆತಂದು ನಯನಾರನ್ನು ದಾಖಲಿಸಿದರು. ಪರಿಶೀಲಿಸಿದ ನಂತರ ನಯನಾ ಸಕ್ಕರೆ ಕಾಯಿಲೆ ಸೇರಿ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿಯಿತು. ಅಲ್ಲದೆ ಅವರ ಹೊಟ್ಟೆಯಲ್ಲಿ ಸುಮಾರು ಎರಡು ಬಕೇಟ್ಗಳಷ್ಟು ಯೂರಿನ್ ಬ್ಲಾಕ್ ಆಗಿತ್ತು.‌ ಸುಮಾರು‌ 45 ದಿನಗಳ ಚಿಕಿತ್ಸೆಯ ನಂತರ ನಯನಾರಲ್ಲಿ ಚೇತರಿಕೆ ಕಂಡು ಬಂದಿತು. ಇನ್ನೇನು ಪ್ರಾಣ ಬಿಡುವಳೆಂದೇ ತಿಳಿದ ಹೆತ್ತವರಿಗೆ ಮಗಳಲ್ಲಿ ಆದ ಬದಲಾವಣೆ ಕಂಡು ಸಂತೋಷಗೊಂಡರು. ಪುನೀತ್ ಕುಮಾರ್ ಈ ಖರ್ಚುವೆಚ್ಚಗಳನ್ನು ಲೆಕ್ಕಿಸದೆ ನಯನಾರನ್ನು ಬದುಕಿಸುವಲ್ಲಿ ಯಶಸ್ವಿಯಾದರು.

ಈ ಬಗ್ಗೆ ಪುನೀತ್ ಕುಮಾರ್ ಮಡಂತ್ಯಾರ್ ಮಾತನಾಡಿ, ನಯನರಲ್ಲಾದ ಬದಲಾವಣೆ, ಅವರ ಹೆತ್ತವರಿಗಾದ ಸಂತೋಷವನ್ನು ಕಂಡು ನನಗೆ ಕೋಟಿ ರೂಪಾಯಿ ಸಿಕ್ಕಿದ್ದಕ್ಕಿಂತಲೂ ಅಧಿಕವೆನಿಸಿತು. ಈ ಘಟನೆಯ ಬಳಿಕ ನಾನು ಯೋಚನೆ ಮಾಡಿದೆ. ನನ್ನ ಊರು ಒಂದು ಸಣ್ಣ ಹಳ್ಳಿ. ಇಲ್ಲಿ‌ ಕಾಯಿಲೆ ಬಂದರೆ ದಾಖಲಿಸಲು ಸರಿಯಾದ ಆಸ್ಪತ್ರೆ ಇಲ್ಲ. ಅಲ್ಲದೆ ನಮ್ಮ ಊರಿನ ಜನರು ಮುಗ್ಧರು. ನಗರದಲ್ಲಿರುವ ಆಸ್ಪತ್ರೆಗಳ ಬಗ್ಗೆ ಪರಿಚಯ ಇಲ್ಲ. ಹಾಗಾಗಿ ಆಮೇಲೆ ನಾನು ಮುತುವರ್ಜಿ ವಹಿಸಿ ರೋಗಿಗಳ ಬಗ್ಗೆ ನಿಗಾ ವಹಿಸಿದೆ. ಆ ಬಳಿಕ ನನ್ನ ಬಗ್ಗೆ ತಿಳಿದುಕೊಂಡ ಜನರು ಈಗ ಏನೇ ತೊಂದರೆ ಆದರೂ ಈಗ ನನಗೆ ಫೋನ್ ಮಾಡಿ ತಿಳಿಸುತ್ತಾರೆ ಎಂದು ಹೇಳಿದರು.

ಈವರೆಗೆ ಸುಮಾರು 150ಕ್ಕೂ ಹೆಚ್ಚು ಮಂದಿ ರೋಗಿಗಳ ಜೀವವನ್ನು ಅವರು ಉಳಿಸಿದ್ದಾರೆ. ಈ ಎಲ್ಲಾ ಕಾರ್ಯಗಳಿಗೆ ನನಗೆ ಎ. ಜೆ. ಆಸ್ಪತ್ರೆಯ ಡಾ. ಸನತ್ ಭಂಡಾರಿ ತುಂಬಾ ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇವರ ಈ ಸೇವೆಯ ಬಗ್ಗೆ ಮಂಗಳೂರಿನ ಎ.ಜೆ. ಆಸ್ಪತ್ರೆಯ ‌ಪ್ಲಾಸ್ಟಿಕ್ ಕಾಸ್ಮೆಟಿಕ್ ಸರ್ಜನ್ ಡಾ. ಸನತ್ ಭಂಡಾರಿ ಎನ್. ಮಾತನಾಡುತ್ತಾ, ಸುಮಾರು ನಾಲ್ಕು ವರ್ಷಗಳಿಂದ ನಮ್ಮ ಆಸ್ಪತ್ರೆಗೆ ಬಡ ರೋಗಿಗಳನ್ನು ದಾಖಲಿಸುತ್ತಿದ್ದಾರೆ. ತಮಗೆ ಎಷ್ಟು ಲಾಭ ಸಿಗುತ್ತದೆ ಎನ್ನುವ ಈಗಿನ ಕಾಲದಲ್ಲಿ ಇಂತಹ ವ್ಯಕ್ತಿಗಳು ಸಿಗುವುದು ಅಪರೂಪ. ಅವರ ಸಾಮಾಜಿಕ ಕಳಕಳಿ ಶ್ಲಾಘನೀಯ. ಪುನೀತ್ ರದ್ದು ನನಗೆ ವಾರಕ್ಕೆ ಒಂದು ಕಾಲ್ ಬಂದೇ ಬರುತ್ತದೆ. ಸರ್ ಒಬ್ಬ ಬಡರೋಗಿಯೊಬ್ಬ ಇದ್ದಾನೆ. ನಿಮ್ಮ ಸಹಾಯ ಬೇಕು ಎಂದು ಹೇಳುತ್ತಾರೆ. ಹಾಗಾಗಿ ನಾನು ಎಮರ್ಜೆನ್ಸಿಯಲ್ಲಿದ್ದರೂ ಇವರ ಕಾಲ್ ಬಂದಾಗ ಆಗ ನನಗೆ ರಿಸೀವ್ ಮಾಡಲು ಸಾಧ್ಯ ಆಗದಿದ್ದರೂ, ಆಮೇಲೆ ಫೋನ್ ಮಾಡಿ ವಿಚಾರಿಸುತ್ತೇನೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English