ಬೆಂಗಳೂರು: ಹೆಚ್1 ಎನ್1 ಸೋಂಕಿನಿಂದ ಬಳಲುತ್ತಿರುವ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಉಡುಪಿ ಮೂಲದ ಮಧುಕರ್ ಶೆಟ್ಟಿ ಸದ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೋಲೀಸ್ ಅಕಾಡೆಮಿಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮಧುಕರ್ ಶ್ವಾಸಕೋಶ ಹಾಗೂ ಜೀರ್ಣಾಂಗ ಸಮಸ್ಯೆಯಿಂದ ಬಳಲುತ್ತಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ. 1999ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಚಿಕ್ಕಮಗಳೂರಿನ ಎಸ್ಪಿಯಾಗಿ ಸೇವೆ ಸಲ್ಲಿಸುವ ವೇಳೆ ಜನಾನುರಾಗಿ ಅಧಿಕಾರಿ ಎಂದು ಹೆಸರಾಗಿದ್ದರು. ಆಗಿನ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರೊಡನೆ ಸೇರಿ ಒತ್ತುವರಿಯಾಗಿದ್ದ ಜಮೀನನ್ನು ಬಿಡಿಸಿ ದಲಿತರಿಗೆ ಕೊಟ್ಟಿದ್ದರು.
ಇನ್ನು ಮಧುಕರ್ ಶೆಟ್ಟಿ ಆರೋಗ್ಯ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಚಂದ್ರಶೇಖರ್ ರೆಡ್ಡಿ ಮಾಹಿತಿ ಕಲೆಹಾಕಿದ್ದಾರೆ.
ಜೊತೆಗೆ ತೆಲಂಗಾಣ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮುಖ್ಯ ಕಾರ್ಯದರ್ಶಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕ ಸರ್ಕಾರ ಈಗಾಗಲೇ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿಯವರನ್ನು ಚಿಕಿತ್ಸೆ ಮೇಲ್ವಿಚಾರಣೆಗೆ ನೇಮಿಸಿದ್ದು ಹೈದರಾಬಾದ್ಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
Click this button or press Ctrl+G to toggle between Kannada and English