ಬೆಂಗಳೂರು: ಲಂಚಕೋರರನ್ನು ಹೆಡೆಮುರಿಕಟ್ಟಲು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರಾಜ್ಯದ 17 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಾದ ಬೆಂಗಳೂರು, ಉಡುಪಿ, ದಾವಣಗೆರೆ, ಚಿಕ್ಕಮಗಳೂರು, ಮೈಸೂರು ತಾಲೂಕು ಕೇಂದ್ರಗಳಾದ ಹುಣಸೂರು, ಕಾರವಾರ, ಮಂಗಳೂರು, ಚಿಂಕತಾಮಣೆ ಸೇರಿದಂತೆ ಇತರೆ ಕಡೆ ದಾಳಿ ನಡೆಸಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಐವರು ಸರ್ಕಾರಿ ಆಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು, ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಎರಡು ಕಡೆ ದಾಳಿ ನಡೆದಿದ್ದು ಬಸವೇಶ್ವರನಗರ ಹಾಗೂ ಸಹಕಾರನಗರದಲ್ಲಿರುವ ಅಧಿಕಾರಿಗಳನ್ನು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕೋ ಆಪರೇಟಿವ್ ಬ್ಯೂರೋದ ಅಡಿಷನಲ್ ರಿಜಿಸ್ಟರ್ ಶಶಿಧರ್, ಬಿಬಿಎಂಪಿಯ ಹೆಚ್ಚುವರಿ ಯೋಜನಾ ನಿರ್ದೇಶಕ ಬಿಸೆಟಪ್ಪ, ಮೈಸೂರು ನಗರರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಕಿರಿಯ ಎಂಜಿನಿಯರ್ ಕೆ.ಮಣಿ, ಸರ್ಕಾರಿ ಶಿಕ್ಷಕರ ಕಾಲೇಜು ಸಂಸ್ಥೆಯ ರೀಡರ್ ಮಂಜುನಾಥಯ್ಯ, ದಾವಣಗೆರೆಯ ಕೃಷಿ ಉಪನಿರ್ದೇಶಕರಾದ ಹಂಸವೇಣಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ನಗರಸಭೆಯ ಪೌರಾಯುಕ್ತರಾಗಿದ್ದ ಮಂಜುನಾಥಯ್ಯ ಅವರ ಮನೆ ಮತ್ತು ಮಂಗಳೂರಿನ ಕಚೇರಿಯ ಮೇಲೆ ಏಕಕಾಲಕ್ಕೆ ಎಸಿಬಿ ದಾಳಿ ನಡೆದಿದೆ. ಕಡೂರು ತಾಲೂಕಿನ ಬೀರೂರು ಎಸಿಬಿ ಡಿವೈಎಸ್ಪಿ ನಾಗೇಶ್ ಶೆಟ್ಟಿ ಹಾಗೂ ಎಸಿಬಿ ಇನ್ಸ್‌ಪೆಕ್ಟರ್ ಜಯರಾಮೇಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು ದಾಖಲೆಗಳನ್ನು ಕಲೆಹಾಕಿದ್ದಾರೆ.
Click this button or press Ctrl+G to toggle between Kannada and English