ವಿಷ ಪ್ರಸಾದ ಪ್ರಕರಣ: ಪೋಷಕರ ಕಳೆದುಕೊಂಡ ಅನಾಥ ಮಕ್ಕಳ ದತ್ತು ಪಡೆದ ಆಳ್ವಾಸ್ ವಿದ್ಯಾಸಂಸ್ಥೆ

12:02 PM, Saturday, December 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

mohan-alvaಮಂಗಳೂರು: ಚಾಮರಾಜನಗರದ ಸುಳ್ವಾಡಿಯಲ್ಲಿ ನಡೆದ ವಿಷ ಪ್ರಸಾದ ಪ್ರಕರಣದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ ಮೂವರು ಮಕ್ಕಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿರುವ ಆಳ್ವಾಸ್ ವಿದ್ಯಾಸಂಸ್ಥೆ ದತ್ತು ಪಡೆದಿದೆ.

ಸೋಮವಾರ ವಿದ್ಯಾರ್ಥಿಗಳು ಸಂಸ್ಥೆಯನ್ನು ಸೇರ್ಪಡೆಯಾಗಲಿದ್ದಾರೆ ಎಂದು ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ತಿಳಿಸಿದ್ದಾರೆ. ವಿಷ ಪ್ರಸಾದ ಪ್ರಕರಣ ನಡೆದ ಸಂದರ್ಭದಲ್ಲಿ ದಂಪತಿಗಳ ಸಾವಿನಿಂದ ಅನಾಥರಾದ ಮೂವರು ಮಕ್ಕಳನ್ನು ಅವರು ಇಚ್ಛಿಸಿದಲ್ಲಿ ದತ್ತು ತೆಗೆದುಕೊಳ್ಳುವುದಾಗಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮೋಹನ್ ಆಳ್ವ ಅವರು ಘೋಷಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಆಳ್ವಾಸ್ ವಿದ್ಯಾ ಸಂಸ್ಥೆಯ ಪ್ರತಿನಿಧಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಅನಾಥರಾದ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಅವರ ಅಭಿಪ್ರಾಯವನ್ನು ಪಡೆದುಕೊಂಡಿದ್ದರು.

ಆಳ್ವಾಸ್ ವಿದ್ಯಾ ಸಂಸ್ಥೆಯ ಪರವಾಗಿ ಅವರಿಗೆ 1 ಲಕ್ಷ ರೂ. ಪರಿಹಾರ ಚೆಕ್ ನೀಡಲಾಗಿತ್ತು. ಅಳ್ವಾಸ್ ವಿದ್ಯಾ ಸಂಸ್ಥೆಯ ದತ್ತು ತೆಗೆದುಕೊಳ್ಳುವ ನಿರ್ಧಾರಕ್ಕೆ ವಿದ್ಯಾರ್ಥಿಗಳು ಒಪ್ಪಿಗೆ ಸೂಚಿಸಿದ್ದರು. ಅದರಂತೆ ಆಳ್ವಾಸ್ ವಿದ್ಯಾ ಸಂಸ್ಥೆ ಮೂವರು ಮಕ್ಕಳಿಗೆ ವಿದ್ಯೆ ನೀಡಿ ಅವರಿಗೆ ಉದ್ಯೋಗ ನೀಡುವವರೆಗೆ ಅವರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.

ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿನಿ ಬಿಎಸ್ಸಿ ನರ್ಸಿಂಗ್ ಕಲಿಯುತ್ತಿದ್ದು ಮತ್ತೋರ್ವ ವಿದ್ಯಾರ್ಥಿನಿ ಬಿಎಸ್ಸಿ ಮೊದಲ ವರ್ಷದಲ್ಲಿ ಹಾಗೂ ಇವರ ಸಹೋದರ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಮೂಡಬಿದ್ರೆಯಲ್ಲಿ ವಿದ್ಯಾಭ್ಯಾಸ ನೀಡಿ ಅವರಿಗೆ ಉದ್ಯೋಗ ಸಿಗುವವರೆಗೆ ಅವರ ಎಲ್ಲಾ ಖರ್ಚುಗಳನ್ನು ಆಳ್ವಾಸ್ ವಿದ್ಯಾ ಸಂಸ್ಥೆ ವಹಿಸಿದೆ.

ಸದ್ಯಕ್ಕೆ ಈ ವಿದ್ಯಾರ್ಥಿಗಳನ್ನು ಈ ಸಾಲಿನ ವಿದ್ಯಾಭ್ಯಾಸ ಮುಂದುವರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಘಟನೆ ನಡೆದ ಬಳಿಕ ಮೃತಪಟ್ಟ ತಂದೆ ತಾಯಿ ಅವರ ಅಂತ್ಯಕ್ರಿಯೆಯನ್ನು ಮುಗಿಸಿ ಆಳ್ವಾಸ್ ವಿದ್ಯಾ ಸಂಸ್ಥೆಗೆ ಬಂದು ಸೇರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದು ಅದರಂತೆ ಸೋಮವಾರ ಬಂದು ಸೇರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಮೋಹನ್ ಆಳ್ವ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English