ಮಂಗಳೂರು ಪಾಲಿಕೆಯ ಮೀಸಲಾತಿ ಅಧಿಸೂಚನೆ ರದ್ದುಗೊಳಿಸಿದ ಹೈಕೋರ್ಟ್‌

8:11 PM, Tuesday, January 15th, 2019
Share
1 Star2 Stars3 Stars4 Stars5 Stars
(No Ratings Yet)
Loading...

mcc  election ಮಂಗಳೂರು  : ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ವಾರು ಮೀಸಲಾತಿ ನಿಗದಿಗೊಳಿಸಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿ ಹೈಕೋರ್ಟ್‌ ಆದೇಶ ಹೊರಡಿಸಿರುವುದರ ಪರಿಣಾಮ, ಇದೀಗ ಪಾಲಿಕೆಯ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯ ಸರಕಾರ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್‌ ಜನವರಿ 28ರೊಳಗೆ ಮೀಸಲಾತಿ ಮರು ನಿಗದಿಗೊಳಿಸುವಂತೆ ಸರಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಮುಂದಿನ ಎರಡು ವಾರಗಳೊಳಗೆ ಈ ವಾರ್ಡ್‌ವಾರು ಮೀಸಲಾತಿ ವಿಚಾರದಲ್ಲಿ ಒಂದು ಮಹತ್ವದ ತೀರ್ಮಾನಕ್ಕೆ ಬರಬೇಕಾಗಿದೆ. ಒಂದುವೇಳೆ, ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಮೀಸಲಾತಿಗೆ ಸಂಬಂಧಿಸಿ ಹೊಸ ಆದೇಶವನ್ನು ಹೊರಡಿಸಲಿದೆಯೇ ಅಥವಾ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದೆಯೇ ಎಂಬ ಕುತೂಹಲ ಎದುರಾಗಿದೆ. ಹೀಗಿರುವಾಗ, ಮಹಾನಗರ ಪಾಲಿಕೆ ಚುನಾವಣೆಗೆ ಎರಡು ತಿಂಗಳೊಳಗೆ ದಿನಾಂಕ ಘೋಷಣೆಯಾಗುವುದು ಅನುಮಾನ ಎನ್ನುವ ಬಿಸಿಬಿಸಿ ಚರ್ಚೆ ಪಾಲಿಕೆ ವ್ಯಾಪ್ತಿಯಲ್ಲಿ ಇದೀಗ ಶುರುವಾಗಿದೆ.

ಪಾಲಿಕೆಯ ಪ್ರಸ್ತುತ ಆಡಳಿತದ ಅವಧಿ ಮಾರ್ಚ್‌ 7ರಂದು ಮುಕ್ತಾಯಗೊಳ್ಳುತ್ತದೆ. ಅಷ್ಟರೊಳಗೆ ಚುನಾವಣೆ ನಡೆದು ನೂತನ ಪರಿಷತ್‌ ರಚನೆ ಆಗಬೇಕಾಗಿದೆ. ಆದರೆ, ಮೀಸಲಾತಿ ಪಟ್ಟಿ ವಿಚಾರದಲ್ಲಿ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ತೆಗೆದುಕೊಂಡಾಗ, ಅದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ. ಹೈಕೋರ್ಟ್‌ ಸೂಚಿಸಿರುವುದರಿಂದ ರಾಜ್ಯ ಸರಕಾರ ಮುಂದಿನ ಎರಡು ವಾರಗಳಲ್ಲಿ ಮರು ಆದೇಶ ಹೊರಡಿಸಿದ್ದರೂ ಚುನಾವಣೆ ನಡೆಸುವ ಬಗ್ಗೆ ನಿರ್ಧಾರಕ್ಕೆ ಬರಲು ರಾಜ್ಯ ಚುನಾವಣಾ ಆಯೋಗಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು.

ಆ ರೀತಿ ಹೊಸ ವಾರ್ಡ್‌ವಾರು ಮೀಸಲಾತಿ ಬಂದ ಮೇಲೆ ಪಾಲಿಕೆ ಚುನಾವಣೆಗೆ ದಿನಾಂಕವನ್ನು ಆಯೋಗ ಘೋಷಣೆ ಮಾಡಿದರೆ, ಅದೇವೇಳೆಗೆ, ಲೋಕಸಭೆ ಚುನಾವಣೆ ಕೂಡ ಎದುರಾಗುವ ಸಾಧ್ಯತೆಯಿದೆ. ಈ ನಡುವೆ, ಶಾಲಾ-ಕಾಲೇಜುಗಳಿಗೆ ಒಂದೆರಡು ತಿಂಗಳಲ್ಲಿ ಪರೀಕ್ಷೆ ಕೂಡ ಶುರುವಾಗಲಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುವಾಗ, ಲೋಕಸಭೆ ಚುನಾವಣೆಗೂ ಮೊದಲು ಮಂಗಳೂರು ಪಾಲಿಕೆ ಚುನಾವಣೆ ನಡೆಯುವ ಸಾಧ್ಯತೆ ತೀರಾ ಕಡಿಮೆಯಿದೆ. ಇನ್ನು, ಪಾಲಿಕೆ 5 ವರ್ಷಗಳ ಅಧಿಕಾರವಧಿ ಮಾರ್ಚ್‌ 7ಕ್ಕೆ ಕೊನೆಗೊಳ್ಳುತ್ತದೆ. ಈ ಕಾರಣಕ್ಕೆ ಪಾಲಿಕೆ ಚುನಾವಣೆಯನ್ನು ಮುಂದೂಡುವುದಾದರೆ, ಪಾಲಿಕೆಗೂ ಆಡಳಿತಾಧಿಕಾರಿಯನ್ನು ನೇಮಕ ಗೊಳಿಸುವ ಅನಿವಾರ್ಯ ಎದುರಾಗಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English