ಮಂಗಳೂರು ಪಾಲಿಕೆಗೆ ಇನ್ನು ಮೇಯರ್ ಇಲ್ಲ, ಜಿಲ್ಲಾಧಿಕಾರಿ ಕೈಗೆ ಆಡಳಿತ

2:09 PM, Friday, March 8th, 2019
Share
1 Star2 Stars3 Stars4 Stars5 Stars
(No Ratings Yet)
Loading...

Senthil ಮಹಾನಗರ : ಮಂಗಳೂರು ಪಾಲಿಕೆಯ ಐದು ವರ್ಷಗಳ (2014-15ರಿಂದ 2018-19) ಕಾಂಗ್ರೆಸ್‌ ಆಡಳಿತಾವಧಿ ಗುರುವಾರಕ್ಕೆ ಮುಗಿದಿದ್ದು, ಮಾ. 8ರಿಂದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಮುಂದಿನ ಚುನಾವಣೆ ನಡೆದು ಮತ್ತೆ ಹೊಸ ಆಡಳಿತ ಯಂತ್ರ ಅಧಿಕಾರಕ್ಕೆ ಬರುವವರೆಗೂ ಪಾಲಿಕೆಯ ಆಡಳಿತಾಧಿಕಾರಿಯಾಗಿ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.

ಪಾಲಿಕೆಯ ಮುಂದಿನ ಚುನಾವಣೆಗೆ ವಾರ್ಡ್‌ವಾರು ಮೀಸಲಾತಿ ಪಟ್ಟಿಯಲ್ಲಿ ಸರಕಾರ ಇನ್ನೂ ಅಂತಿಮಗೊಳಿಸದಿರುವ ಕಾರಣದಿಂದಾಗಿ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳು ಆಡಳಿತದ ನಿರ್ವಹಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ, ಲೋಕಸಭೆ ಚುನಾವಣೆ ಕೂಡ ಎದುರಾಗಿರುವ ಕಾರಣದಿಂದಾಗಿ ಕೂಡ ಪಾಲಿಕೆ ಚುನಾವಣೆ ಮತ್ತಷ್ಟು ವಿಳಂಬವಾಗುವ ಲಕ್ಷಣ ಕಾಣಿಸುತ್ತಿದೆ. ಹೀಗಾಗಿ, ಅನಿವಾರ್ಯವಾಗಿ ಪಾಲಿಕೆಗೆ ಆಡಳಿತಾಧಿಕಾರಿಗಳ ನೇಮಕ ಮಾಡಬೇಕಾಗಿದೆ.

ಹಾಲಿ ಮೇಯರ್‌ ಭಾಸ್ಕರ್‌ ಕೆ., ಉಪಮೇಯರ್‌ ಮೊಹಮ್ಮದ್‌, ಸ್ಥಾಯೀ ಸಮಿತಿ ಅಧ್ಯಕ್ಷರು, ಮುಖ್ಯ ಸಚೇತಕರು, ವಿಪಕ್ಷ ನಾಯಕರ ಸ್ಥಾನದ ಅಧಿಕಾರಾವಧಿ ಗುರುವಾರಕ್ಕೆ ಕೊನೆಗೊಂಡಿದ್ದು, ಸೋಮವಾರದವರೆಗೆ ಅವರೆಲ್ಲರೂ ಪಾಲಿಕೆ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಪಾಲಿಕೆಯಲ್ಲಿ ಈಗ ಮೇಯರ್‌ ಅವರ ಅಧಿಕಾರವಧಿ ಮಾ. 7ಕ್ಕೆ ಮುಗಿದಿದೆ. ಆದರೆ, ಕಾರ್ಪೊರೇಟರ್‌ಗಳು ವಾರ್ಡ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ದಿನದ ಲೆಕ್ಕಾಚಾರದಲ್ಲಿ ಮಾ.11ರ ವರೆಗೆ ಎಲ್ಲರೂ ಕಾರ್ಪೊರೇಟರ್‌ಗಳಾಗಿರುತ್ತಾರೆ. ಹೀಗಾಗಿ, ಅಲ್ಲಿಯವರೆಗೆ ಎಲ್ಲ 60 ವಾರ್ಡ್‌ಗಳ ಹಾಲಿ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಯಾವುದೇ ತುರ್ತು ಕಾರ್ಯಗಳನ್ನು ಮನಪಾ ಆಯುಕ್ತರ ಮುಖೇನ ಆಡಳಿತಾಧಿಕಾರಿಯ ಗಮನಕ್ಕೆ ತಂದು ಒಪ್ಪಿಗೆ ಪಡೆದುಕೊಳ್ಳಬಹುದು. ಮಾ. 11ರ ಬಳಿಕ ಹಾಲಿ ಕಾರ್ಪೊರೇಟರ್‌ಗಳು ಮಾಜಿ ಕಾರ್ಪೊರೇಟರ್‌ಗಳಾಗಲಿದ್ದಾರೆ. ವಿಶೇಷವೆಂದರೆ, ಆ ಸಂದರ್ಭದಲ್ಲಿಯೂ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದಾದರೂ ತುರ್ತು ಕಾರ್ಯಗಳು ನಡೆಸಬೇಕಿದ್ದರೆ ಆಡಳಿತಾಧಿಕಾರಿಯ ಗಮನಕ್ಕೆ ತಂದು ಒಪ್ಪಿಗೆ ಪಡೆದುಕೊಳ್ಳಲು ಅವಕಾಶವಿದೆ.

ಪಾಲಿಕೆ ಕಾಂಗ್ರೆಸ್‌ ಆಡಳಿತಾವಧಿ ಮುಗಿಯುತ್ತಿದ್ದಂತೆ ಇದೀಗ ಪಕ್ಷಗಳ ಮಧ್ಯೆ ರಾಜಕೀಯ ತಾಲೀಮು ಶುರುವಾಗಲು ಆರಂಭಿಸಿದೆ. ಮೀಸಲಾತಿ ಪಟ್ಟಿಯಂತೆ ವಾರ್ಡ್‌ವ್ಯಾಪ್ತಿಯಲ್ಲಿ ಯಾರಿಗೆ ಅವಕಾಶ? ಎಂಬ ಚರ್ಚೆ ಈಗ ಶುರುವಾಗಿದೆ.

ಲೋಕಸಭಾ ಚುನಾವಣೆ ಹತ್ತಿರವಿದ್ದರೂ ಅದರ ಬಳಿಕ ನಡೆಯುವ ಮನಪಾ ಚುನಾವಣೆಯ ಬಗ್ಗೆಯೇ ಪಾಲಿಕೆ ಸದಸ್ಯರು ಹೆಚ್ಚು ಆಸಕ್ತಿ ತೋರಿದಂತಿದೆ. ವಿಶೇಷವೆಂದರೆ, ಇಲ್ಲಿಯವರೆಗೆ ವಾರ್ಡ್‌ ಗಳಲ್ಲಿ ಕಾಣಸಿಗದ ಕೆಲವು ಕಾರ್ಪೊರೇಟರ್‌ಗಳು ಈಗ ತಮ್ಮ ವಾರ್ಡ್‌ಗಳಲ್ಲಿ ಕಾಣಸಿಗುತ್ತಿದ್ದಾರೆ. ಕೆಲವು ವಾರ್ಡ್‌ಗಳಲ್ಲಂತು ಕಾಮಗಾರಿಗಳು ಇದೀಗ ಕೊನೆಯ ಹಂತದಲ್ಲಿ ಬಿರುಸಿನಿಂದ ನಡೆಯುತ್ತಿದೆ. ಬಿಜೆಪಿ ಕಾಂಗ್ರೆಸ್‌ ಮುಖ್ಯ ನೆಲೆಯಲ್ಲಿ ಪೈಪೋಟಿಯಲ್ಲಿದ್ದರೆ, ಜೆಡಿಎಸ್‌, ಸಿಪಿಐಎಂ, ಎಸ್‌ಡಿಪಿಐ ಕೂಡ ವಾರ್ಡ್‌ ಮಟ್ಟದಲ್ಲಿ ರಾಜಕೀಯ ಬೆಳವಣಿಗೆಯನ್ನು ಆರಂಭಿಸಿದೆ.

‘ಸುದಿನ’ ಜತೆಗೆ ಮಾತನಾಡಿದ ಮೇಯರ್‌ ಭಾಸ್ಕರ್‌ ಕೆ., 5 ವರ್ಷಗಳಲ್ಲಿ ಮಹಾನಗರವನ್ನು ಅತ್ಯಂತ ಪರಿಪೂರ್ಣ ನೆಲೆಯಲ್ಲಿ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಮಂಗಳೂರಿನ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸ್ಮಾರ್ಟ್‌ ಸಿಟಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನಗರ ವಿವಿಧ ರೀತಿಯಲ್ಲಿ ಮೂಲ ಸೌಕರ್ಯವನ್ನು ಕಂಡಿದೆ ಎನ್ನುತ್ತಾರೆ. ಇನ್ನೊಂದೆಡೆ, ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿ ‘ಪಂಪ್‌ವೆಲ್‌ ಪ್ಲೈಓವರ್‌ ತಡವಾಗುವುದಕ್ಕೆ ಪಾಲಿಕೆಯ ಕಾಂಗ್ರೆಸ್‌ ಆಡಳಿತವೇ ಕಾರಣವಾಗಿತ್ತು. ಜತೆಗೆ ನಗರಕ್ಕೆ ಅನುದಾನ ಬಂದಿದ್ದರೂ ಅನುದಾನ ಬಂದಿಲ್ಲ ಎಂದು ಹೇಳುತ್ತ ಪರಿಣಾಮಕಾರಿಯಾದ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕೇಂದ್ರದಲ್ಲಿ ಮೋದಿ ಸರಕಾರದಿಂದ ಪಾಲಿಕೆಗೆ ಅತ್ಯಂತ ಹೆಚ್ಚು ಅನುದಾನ ಬಂದಿದೆ. ಆದರೆ, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಲ್ಲ’ ಎನ್ನುವುದು ಅವರ ಆರೋಪ.

ಮಂಗಳೂರು ಪಾಲಿಕೆಯ ಆಡಳಿತಾಧಿಕಾರಿಯಾಗಿ ನಿಯಮದ ಪ್ರಕಾರ ತಾನು ಮಾ. 8ರಂದು ಅಧಿಕಾರ ಸ್ವೀಕರಿಸಲಿದ್ದೇನೆ. ಮುಂದೆ ವಾರದಲ್ಲಿ ನಿಗದಿತ ಸಮಯವನ್ನು ಪರಿಶೀಲಿಸಿ ಪಾಲಿಕೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ಲೋಕಸಭಾ ಚುನಾವಣೆ, ಬಳಿಕ ಪಾಲಿಕೆ ಚುನಾವಣೆಯೂ ಮುಂದೆ ನಡೆಯಲಿದೆ. ಇದೆಲ್ಲದರ ಬಗ್ಗೆ ಸ್ಥೂಲವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ, ದ.ಕ.

ಪಾಲಿಕೆಯ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಮಾ. 8ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಪಾಲಿಕೆಯಲ್ಲಿ ಮುಂದೆ ನಡೆಯುವ ಎಲ್ಲ ಕಾರ್ಯಗಳು ಅವರ ನೇತೃತ್ವದಲ್ಲಿ ನಡೆಯಲಿದೆ. ಅವರಿಗೆ ಸೂಕ್ತ ಸಲಹೆ-ಸೂಚನೆಗಳಿಗಾಗಿ ಸುಮಾರು 25 ಸದಸ್ಯರಿರುವ ಆಡಳಿತ ಸಮಿತಿಯನ್ನು ಶೀಘ್ರದಲ್ಲಿ ರಚಿಸಲಾಗುವುದು. ಈ ಮೂಲಕ ಪಾಲಿಕೆ ವ್ಯಾಪ್ತಿಯ ನಾಗರಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೊಡಿಕೊಳ್ಳಲಾಗುವುದು.
– ಯು.ಟಿ. ಖಾದರ್‌,  ನಗರಾಭಿವೃದ್ಧಿ ಸಚಿವರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English