ಮಂಗಳೂರು : ನರೇಂದ್ರ ಮೋದಿ ದೇಶದ ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಹೇಳಿದುದರ ಬಗ್ಗೆ ದಾಖಲೆ ನೀಡಿದರೆ ತಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ದ.ಕ.ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವತ್ತೂ ಕೂಡ 15 ಲಕ್ಷ ರೂ. ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ಹಾಕುತ್ತೇನೆ ಎಂದು ಹೇಳಲಿಲ್ಲ, ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಹಾಕುವಷ್ಟು ಕಪ್ಪು ಹಣ ಸ್ವಿಸ್ ಬ್ಯಾಂಕ್‌ನಲ್ಲಿದೆ ಎಂದಷ್ಟೇ ಮೋದಿ ಹೇಳಿದ್ದಾರೆ ಎಂದರು.
60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಆಗದ್ದು, 5 ವರ್ಷ ಆಡಳಿತ ನಡೆಸಿದ ಮೋದಿಗೆ ಸಾಕಾದೀತೇ ? ಸ್ವಲ್ಪ ಸಮಯ ಕೊಡಿ. ಮೋದಿ ಎಲ್ಲವನ್ನೂ ಮಾಡಿ ತೋರಿಸುತ್ತಾರೆ. ಈಗ ದೇಶಾದ್ಯಂತ ಮೋದಿಯ ಹವಾ ಎದ್ದಿದೆ. ಕಾಂಗ್ರೆಸ್-ಜೆಡಿಎಸ್‌ನವರು ಮೋದಿ ಹವಾದಿಂದ ತತ್ತರಿಸಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.
ಪ್ರಧಾನಿ ಮೋದಿ ಜಾತಿ, ಭಾಷೆ, ಧರ್ಮದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿಲ್ಲ. ಬಿಜೆಪಿಯ ಡಿಕ್ಷನರಿಯಲ್ಲಿ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂಬ ಪದವೇ ಇಲ್ಲ. ರಾಜಕಾರಣದ ಕ್ಷಿಪಣಿಯಂತಿರುವ ಮೋದಿ ಏಕ್ ಭಾರತ್, ಶ್ರೇಷ್ಠ್ ಭಾರತ್ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಜನಾರ್ದನ ಪೂಜಾರಿಯಂತಹ ಬಲಿಷ್ಠ ನಾಯಕರನ್ನು ಸೋಲಿಸಿದ ನಳಿನ್‌ಗೆ ಮಿಥುನ್ ಸರಿಸಾಟಿಯಾದ ಅಭ್ಯರ್ಥಿಯಲ್ಲ. ನಳಿನ್ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಈಗಾಗಲೆ ಬಿಜೆಪಿ ಮೊದಲ ಹಂತದ ಮನೆ ಮನೆ ಭೇಟಿ ನೀಡಿ ಪ್ರಚಾರ ನಡೆಸಿದೆ. ಇನ್ನೀಗ ಮತ್ತೊಂದು ಸುತ್ತಿನ ಪ್ರಚಾರ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸತೀಶ್ ಕುಂಪಲ, ಸಂಜಯ ಪ್ರಭು, ಪುರುಷೋತ್ತಮ ಭಟ್, ಉಪಸ್ಥಿತರಿದ್ದರು.
Click this button or press Ctrl+G to toggle between Kannada and English