ಎಂಟು ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿದ ತಂದೆ

10:18 PM, Thursday, May 30th, 2019
Share
1 Star2 Stars3 Stars4 Stars5 Stars
(No Ratings Yet)
Loading...

laxmanaಮಂಗಳೂರು :  ತಂದೆಯೇ ಎಂಟು ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರಿನ ಬೋಳಾರ ಸಮೀಪ ನೇತ್ರಾವತಿ ನದಿ ದಡದಲ್ಲಿ ಸೋಮವಾರ ಮೇ 27ರಂದು ಎಂಟು ತಿಂಗಳ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ, ಕೊಪ್ಪಳ ಮೂಲದ ಲಕ್ಷ್ಮಣ ತೆಂಗಿನಹಾಳ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮಣ ತೆಂಗಿನಹಾಳ ಮತ್ತು ರೂಪಾ ದಂಪತಿ ಬೋಳಾರದಲ್ಲಿರುವ ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ತಾತ್ಕಾಲಿಕ ಶೆಡ್ ‌ನಲ್ಲಿ ಮಗುವಿನೊಂದಿಗೆ ವಾಸವಾಗಿದ್ದರು. ಲಕ್ಷ್ಮಣ ಮಂಗಳೂರಿನ ಕಟ್ಟಡವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮೇ 27ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ಎನ್ನಲಾಗಿದೆ. ಪತ್ನಿ ರೂಪಾ ಮಗುವನ್ನು ಬೆಳಗ್ಗೆ ಮನೆಯಲ್ಲೇ ಬಿಟ್ಟು ಕೆಲಸಕ್ಕೆ ತೆರಳಿದ್ದರು.

ಈ ನಡುವೆ ಮನೆಯಿಂದ ಮಗು ಏಕಾಏಕಿ ಕಾಣೆಯಾಗಿತ್ತು. ತಾನು 11 ಗಂಟೆ ವೇಳೆಗೆ ಮಗುವನ್ನು ಜೋಳಿಗೆಯಲ್ಲಿ ಮಲಗಿಸಿ ಹೊರಗೆ ಹೋಗಿದ್ದು, ಮಧ್ಯಾಹ್ನ 12ಕ್ಕೆ ಮರಳಿ ಬಂದಾಗ ಮಗು ಕಾಣೆಯಾಗಿತ್ತು ಎಂದು ಲಕ್ಷ್ಮಣ, ಪತ್ನಿಗೆ ತಿಳಿಸಿದ್ದ. ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಸಂಜೆ 5 ಗಂಟೆಗೆ ಬೋಳಾರ ಬದಿಯ ನೇತ್ರಾವತಿ ನದಿ ದಡದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.

ಮಗುವಿನ ಹಣೆಯ ಎರಡೂ ಬದಿ ತರಚಿದ ಗಾಯ, ಮೂಗಿನ ಬದಿ ಉಗುರಿನ ಗಾಯದ ಗುರುತುಗಳಿರುವುದು ಕಂಡು ಬಂದಿದ್ದು, ಮಗುವನ್ನು ಉಸಿರುಗಟ್ಟಿಸಿ ಕೊಲೆಗೈದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಗುವಿನ ತಂದೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಾಯಿ ಬಿಟ್ಟಿದ್ದಾನೆ. ತಾನೇ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿ ನದಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಬ್ಬರೂ ಹೆಣ್ಣು ಮಕ್ಕಳು ಹುಟ್ಟಿದ್ದರಿಂದ ಲಕ್ಷ್ಮಣ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English