ಬಂಟ್ವಾಳ : ಪೆರ್ಲ ಸಮೀಪ ಅಕ್ರಮ ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಪಿಕಪ್ ವಾಹನ ದರೋಡೆ ಮಾಡಿದ್ದಾರೆ ಎಂದು ಕೇಸು ದಾಖಲಾದ ಬೆನ್ನಲ್ಲೇ ಬಂಟ್ವಾಳ ತಾಲೂಕಿನ ಹಲವೆಡೆ ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಇದರಿಂದ ಸುಮಾರು ಮೂರು ಬಸ್ ಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಕಿಡಿಗೇಡಿಗಳು ಸೂರಿಕುಮೇರು, ಕುದ್ರೆಬೆಟ್ಟು, ಪಾಣೆಮಂಗಳೂರಿನಲ್ಲಿ ಖಾಸಗಿ ಬಸ್ ಗಳಿಗೆ ಕಲ್ಲೆಸೆದು ಹಾನಿ ಮಾಡಿದ ಪ್ರತ್ಯೇಕ ಘಟನೆಗಳು ವರದಿಯಾಗಿವೆ.
ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ವಿಟ್ಲ ಠಾಣಾ ವ್ಯಾಪ್ತಿಯ ಸೂರಿಕುಮೇರು ಹಾಗೂ ಬಂಟ್ವಾಳ ಠಾಣಾ ವ್ಯಾಪ್ತಿಯ ಕುದ್ರೆಬೆಟ್ಟುವಿನಲ್ಲಿ ಎರಡು ಖಾಸಗಿ ಬಸ್ ಗಳಿಗೆ ಕಲ್ಲೆಸೆದು ಹಾನಿ ಮಾಡಿದೆ.
ಕುದ್ರೆಬೆಟ್ಟುವಿನಲ್ಲಿ ಕಲ್ಲೆಸೆತದಿಂದ ಸೆಲಿನಾ ಹೆಸರಿನ ಖಾಸಗಿ ಬಸ್ಸಿನ ಮುಂಭಾಗದ ಗಾಜು ಸಂಪೂರ್ಣ ಧ್ವಂಸಗೊಂಡಿದೆ. ಈ ಸಂದರ್ಭ ಬಸ್ ಚಾಲಕ ಸೇರಿದಂತೆ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಸೋಮವಾರ ಕಾಸರಗೋಡಿನ ಗಡಿಭಾಗವಾದ ಪೆರ್ಲ ಸಮೀಪ ಅಕ್ರಮ ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಪಿಕಪ್ ವಾಹನ ದರೋಡೆ ಮಾಡಲಾಗಿದೆ ಎಂದು ವಿಟ್ಲ ಪ್ರಖಂಡದ ಬಜರಂಗ ದಳದ ಮುಖಂಡ ಅಕ್ಷಯ್ ರಜಪೂತ್ ಸೇರಿದಂತೆ ಹಲವು ಮಂದಿಯ ವಿರುದ್ಧ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English