ಓವರ್ ಟೇಕ್ : ಬಸ್ ಹೊಂಡಕ್ಕೆ 24 ಮ೦ದಿಗೆ ಗಾಯ

6:15 PM, Wednesday, June 27th, 2012
Share
1 Star2 Stars3 Stars4 Stars5 Stars
(3 rating, 3 votes)
Loading...

Bus Accident ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಬುಧವಾರ ಬೆಳಿಗ್ಗೆ ಖಾಸಗಿ ಬಸ್ಸೊಂದು ಅತೀ ವೇಗದ ಚಾಲನೆಯಿಂದ ಉರುಳಿ ಬಿದ್ದ ಪರಿಣಾಮ 24 ಪ್ರಯಾಣಿಕರು ಗಾಯಗೊಂಡು ಇಬ್ಬರ ಸ್ಥಿತಿ ಗಂಭೀರವಾಗಿದೆ.

ಬುಧವಾರ ಪೂರ್ವಾಹ್ನ 11ರ ಸುಮಾರಿಗೆ ಈ ಬಸ್‌ ಮಂಗಳೂರಿನಿಂದ ತಲಪಾಡಿಯ ಕಿನ್ಯಕ್ಕೆ ತೆರಳುತ್ತಿತ್ತು. ಕಲ್ಲಾಪು ಸಮೀಪದ ಆಡಂಕುದ್ರು ಬಳಿ ಬಲಬದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಣ್ಣಿನ ರಸ್ತೆಗೆ ಚಾಲಕ ಬಸ್ಸನ್ನು ವೇಗವಾಗಿ ತಿರುಗಿಸಿದ್ದು, ಅದೇ ವೇಳೆಗೆ ಎದುರಿನಿಂದ ಬಂದ ಇನ್ನೊಂದು ಖಾಸಗಿ ಬಸ್‌ಗೆ ಸೈಡ್‌ ನೀಡಲೆಂದು ಬದಿಗೆ ಸರಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಆಳಕ್ಕೆ ಇಳಿದು ಕಣಚೂರು ಸೀಸನಿಂಗ್‌ ಇಂಡಸ್ಟ್ರೀಸ್‌ನ ಆವರಣದ ಗೋಡೆಗೆ ಬಡಿದು ಉರುಳಿ ಬಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಸ್ಸಿನಲ್ಲಿ ಕಡಿಮೆ ಜನರಿದ್ದ ಕಾರಣ ದೊಡ್ಡ ದುರಂತ ತಪ್ಪಿದಂತಾಗಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಸಂಕೋಳಿಗೆ ನಿವಾಸಿ ಅಲ್ತಾಫ್‌ (35), ಬೋಳಿಯಾರ್‌ ನಿವಾಸಿ ದೀಪಕ್‌ (20), ಕೋಟೆಕಾರು ನಿವಾಸಿ ಲಾವಣ್ಯ (21) ಆತ್ತಾವರ ನಿವಾಸಿ ಸರೋಜಿನಿ (60) ಅವರ ಸೊಸೆ ಶಶಿಪ್ರಭ (30), ಕೆರೆಬೆೈಲು ನಿವಾಸಿ ರತನ್‌ ಮೊಂತೇರೊ (20) ಅವರ ಸಹೋದರ ರೀವನ್‌ ಮೊಂತೇರೊ ಇವರು ತೊಕ್ಕೊಟ್ಟಿ ಸಹರಾ ಆಸ್ಪತ್ರೆಯಲ್ಲಿ ದಾಖಲಾದರೆ, ಬಾಕ್ರಬೈಲು ನಿವಾಸಿ ಅವಿನಾಶ್‌ (20), ಕೊಲ್ಯ ನಿವಾಸಿ ಸುಕನ್ಯಾ (44), ಕುಂಪಲ ಪಿಲಾರು ಪಲ್ಲ ನಿವಾಸಿ ವಿಶ್ವನಾಥ (45), ಪವಿತ್ರಾ (22) ಶಾಲಿನಿ ಆಚಾರ್ಯ (42), ಮೋಹನ್‌ದಾಸ್‌ (30), ಸೆಬಾಸ್ಟಿಯನ್‌ (51), ಜ್ಯೋತಿ (20), ಕೃಷ್ಣಪ್ಪ (75), ಉಚ್ಚಿಲ ನಿವಾಸಿ ಅಶೋಕ್‌ (37), ಸುರೇಶ್‌ ಶೆಟ್ಟಿ (45)  ಇವರನ್ನು ಕಂಕನಾಡಿಯ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸಾವಿತ್ರಿ (38) ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮಂಗಳೂರು ಜೈನ್‌ ಕಂಪೌಂಡಿನ ವಾಸು ದೇವೋಜಿ ರಾಬ್‌ (61), ಕೋಟೆಕಾರು ನಿವಾಸಿ ಎಚ್‌.ಎಂ. ಕೋಟೆಕಾರ್‌ (78), ಬಜಾಲ್‌ ಜಲ್ಲಿಗುಡ್ಡೆ ನಿವಾಸಿ ಕವಿತಾ (38), ಕೊಲ್ಯ ನಿವಾಸಿ ದೇವದಾಸ್‌ (45), ಅವರ ಪುತ್ರ ಪ್ರಶಾಂತ್‌ (18) ತೊಕ್ಕೊಟ್ಟಿನ ನೇತಾಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಲಕ ಕೃಷ್ಣ ಶೆಟ್ಟಿ ಅವರಿಗೂ ಗಾಯಗಳಾಗಿವೆ.

ಮಂಗಳೂರಿನಿಂದ ತಲಪಾಡಿ ಮತ್ತಿತರ ಪ್ರದೇಶಗಳಿಗೆ ಹೋಗುವ ಬಸ್‌ಗಳಿಗೆ ಟೈಮ್‌ ಕೀಪರ್‌ಗಳನ್ನು ಬಸ್‌ ಗಳ ಮಾಲಕರು ರೇ ನೇಮಿಸಿದ್ದು, ಕೆಲವೇ ನಿಮಿಷಗಳ ಅಂತರದಲ್ಲಿ ಬಸ್‌ಗಳನ್ನು ತೊಕ್ಕೊಟ್ಟಿಗೆ ತಲಪಿಸುವ ಜವಾಬ್ದಾರಿ ಬಸ್‌ ಚಾಲಕರಿಗಿದೆ. ಇದರಿಂದಾಗಿ ಇದೇ ಮಾರ್ಗವಾಗಿ ಚಲಿಸುತ್ತಿದ್ದ ಇನ್ನೊಂದು ಬಸ್‌ ಅಲ್ಪ ಅಂತರದಲ್ಲಿ ಸಾಗುತ್ತಿದ್ದು, ಅದನ್ನು ಹಿಂದಿಕ್ಕುವ ಉದ್ದೇಶವನ್ನು ಚಾಲಕ ಹೊಂದಿದ್ದು ಅಪಘಾತಕ್ಕೆ ಇನ್ನೊಂದು ಕಾರಣ ಎನ್ನಲಾಗಿದೆ.

ಬಸ್‌ ಅಪಘಾತ ಹೆದ್ದಾರಿಯಿಂದ ಹೊರಗಿನ ರಸ್ತೆಯಲ್ಲಿ ಸಂಭವಿಸಿದರೂ ಚಲಿಸುವ ವಾಹನಗಳು ಅಪಘಾತದ ಸ್ಥಳದಲ್ಲಿ ನಿಧಾನವಾಗಿ ಚಲಿಸಿದ್ದರಿಂದ ಸುಮಾರು ಒಂದು ಗಂಟೆ ಕಾಲ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವಿಳಂಬವಾಯಿತು.

ಉಳ್ಳಾಲ ಮತ್ತು ಕಂಕನಾಡಿ ಗ್ರಾಮಾಂತರ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English