ಬೆಂಗಳೂರು: ಜುಲೈ 17ರ ಚಂದ್ರಗ್ರಹಣ ಮೈತ್ರಿ ಸರ್ಕಾರ ಕ್ಕೆ ಗಂಡಾಂತರ ತರಬಹುದು ಎಂದು ಮುಖ್ಯಮಂತ್ರಿ ಅವರ ಆಪ್ತ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.
ಜುಲೈ 2ರಂದು ಸೂರ್ಯಗ್ರಹಣ ಸಂಭವಿಸಿದ್ದು, ಜು. 17ರಂದು ಚಂದ್ರಗ್ರಹಣವಾಗಲಿದೆ. ಅದೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೇಳಿ ಮೇಷರಾಶಿಯವರು. ಈ ರಾಶಿಯವರಿಗೆ ಗಂಡಾಂತರವಿದೆ ಎಂಬುದು ದೇವೇಗೌಡರ ಕುಟುಂಬಕ್ಕೆ ಆತಂಕ ತಂದಿದೆ. ಈ ನಡುವೆ ಜುಲೈ ತಿಂಗಳಲ್ಲಿಯೇ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಶಾಸಕರು ರಾಜೀನಾಮೆ ನೀಡುವ ಮೂಲಕ ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿ ಮಾಡಿರುವುದು ಹಾಗೂ ಗ್ರಹಣ ಸಂಭವಿಸುತ್ತಿರುವುದು ಕಾಕತಾಳೀಯವಾಗಿದೆ.
ವಿಧಾನಸಭೆ ಅಧಿವೇಶನ ಆರಂಭವಾದ ಮೊದಲ ದಿನ ಜು 12ರಂದು ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿ ಮಾಡುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಬುಧವಾರ ವಿಶ್ವಾಸಮತಯಾಚನೆಗೆ ಬಹುತೇಕ ನಿರ್ಧರಿಸಿದ್ದರು. ಆದರೆ ಇಂದು ದಿಢೀರ್ ಆಗಿ ದಿನಾಂಕ ಬದಲಾಯಿಸಿದ್ದಾರೆ. ಅದೂ ಜುಲೈ 17ರ ಬುಧವಾರದ ಬದಲಾಗಿ ಜು 18ರಂದು ಸದನದಲ್ಲಿ ವಿಶ್ವಾಸ ಮತ ಯಾಚನೆಗೆ ತೀರ್ಮಾನಿಸಿದ್ದಾರೆ.
ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ರಾಜೀನಾಮೆ ನೀಡಿರುವ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಈ ನಡುವೆ ಚಂದ್ರಗ್ರಹಣ ಹಿನ್ನಲೆಯಲ್ಲಿ ಬುಧವಾರ ಬೇಡ ಶುಕ್ರವಾರ ವಿಶ್ವಾಸ ಮತಯಾಚಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಆದರೆ ಸ್ಪೀಕರ್ ಬುಧವಾರವೂ ಬೇಡ, ಶುಕ್ರವಾರವೂ ಬೇಡ, ಗುರುವಾರ ವಿಶ್ವಾಸಮತಯಾಚಿಸಿ ಎಂದು ಸೂಚಿಸಿದ್ದಾರೆ.
ಆ ಮೂಲಕ ಚಂದ್ರ ಗ್ರಹಣ ಸಂಭವಿಸಿದ ಮರು ದಿನ ಗ್ರಹಣ ಪ್ರಭಾವ ಇರುತ್ತದೆ. ಹೀಗಾಗಿ ಮರುದಿನ ಅಂದರೆ ಜು. 18ರಂದು ವಿಶ್ವಾಸ ಮತ ಯಾಚಿಸಿದರೆ ಮೈತ್ರಿ ಸರ್ಕಾರ ಉಳಿದುಕೊಳ್ಳಬಹುದು ಎಂಬ ಜ್ಯೋತಿಷಿಗಳ ಸಲಹೆಯನ್ನು ನಂಬಿ ದಿನಾಂಕ ನಿಗದಿ ಮಾಡಿದ್ದಾರೆ ಎನ್ನಲಾಗಿದೆ.
ಮತ್ತೊಂದು ಮಾಹಿತಿ ಪ್ರಕಾರ ವಿಶ್ವಾಸಮತ ಯಾಚನೆ ಮಾಡಿ ಬಹುಮತ ಪಡೆಯಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತಿದೆ. ಹೀಗಾಗಿ ಗ್ರಹಣ ಸಂಭವಿಸಿದ ಬುಧವಾರ ರಾಜೀನಾಮೆ ನೀಡುವುದು ಒಳ್ಳೆಯ ದಿನವಲ್ಲ ಎಂಬ ಲೆಕ್ಕಾಚಾರ ಅವರದ್ದಾಗಿದೆ.
ಜೊತೆಗೆ ಸಚಿವ ಎಚ್ ಡಿ ರೇವಣ್ಣ ಅವರೂ ಸಹ ಸರ್ಕಾರ ರಕ್ಷಿಸುವಂತೆ ಹಾಗೂ ಕುಮಾರಸ್ವಾಮಿ ಅವರ ಮೇಷರಾಶಿ ಮೇಲೆ ಪ್ರಭಾವ ಬೀರಿ ಸ್ಥಾನ ಕಳೆದುಕೊಳ್ಳದಂತೆ ಉಳಿಸಲು ಶಕ್ತಿ ದೇವತೆಗಳ ಮೊರೆ ಹೋಗಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ, ಶೃಂಗೇರಿ ಶಾರದೆ, ಕೊಲ್ಲೂರು ಮೂಕಾಂಬಿಕೆ, ಕಟೀಲು ದುರ್ಗಾ ಪರಮೇಶ್ವರಿ, ಸೌತಡ್ಕ ಗಣಪತಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ಸೇರಿದಂತೆ ಹಲವು ದೇವಾಲಯಗಳಲ್ಲಿ ಬರಿಗಾಲಲ್ಲಿ ತೆರಳಿ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದೇವೇಗೌಡರ ಕುಟುಂಬದ ದೈವಭಕ್ತಿ, ಗ್ರಹಣ, ಪೂಜೆ , ಹೋಮ ಹವನಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುರ್ಚಿಯನ್ನು ಉಳಿಸಲು, ವಿಶ್ವಾಸಮತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹೇಗೆ ಸಹಕಾರಿಯಾಗಲಿದೆ ಎನ್ನುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿ
ವಿಶ್ವಾಸಮತಕ್ಕೆ ಅತೃಪ್ತರು ಗೈರು
ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಾಗೂ ಜೆಡಿಎಶ್ ನ ಅತೃಪ್ತ ಶಾಸಕರು ಗುರುವಾರ ನಡೆಯಲಿರುವ ವಿಶ್ವಾಸಮತ ಯಾಚನೆಯ ವೇಳೆ ವಿಧಾನಸಭೆಗೆ ಗೈರು ಆಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜುಲೈ18ಕ್ಕೆ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಅಂದು ಮುಂಬೈನ ಐಷಾರಾಮಿ ಹೋಟಲ್ ನಲ್ಲಿ ತಂಗಿರುವ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಎಲ್ಲ ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ, ವಿಶ್ವಾಸಮತ ಯಾಚನೆಯ ವೇಳೆ ಸದನಕ್ಕೆ ಆಗಮಿಸುವ ಯಾವುದೇ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ರಾಜೀನಾಮೆ ಶೀಘ್ರ ಅಂಗೀಕಾರ ಕೋರಿ ಶಾಸಕರು ಸಲ್ಲಿಸಿರುವ ಅರ್ಜಿ ಕುರಿತು ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.
ಇದಲ್ಲದೆ ಇನ್ನೂ ಮೂರ್ನಾಲ್ಕು ಮಂದಿ ಶಾಸಕರು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Click this button or press Ctrl+G to toggle between Kannada and English