ವಿಜಯ ಬ್ಯಾಂಕ್ ಸ್ಥಾಪಕರ ಮತ್ತು ನಿರ್ದೇಶಕರ ಫೋಟೊಗಳನ್ನು ಕಿತ್ತುಹಾಕಿದ ಬ್ಯಾಂಕ್ ಆಫ್ ಬರೋಡಾ

1:45 PM, Sunday, July 21st, 2019
Share
1 Star2 Stars3 Stars4 Stars5 Stars
(No Ratings Yet)
Loading...

Vijayabankಮಂಗಳೂರು : ತುಳುನಾಡಿನಲ್ಲಿ ಸ್ಥಾಪನೆಯಾದ  ವಿಜಯ ಬ್ಯಾಂಕ್ ಕೇವಲ ನೆನಪಿಗೆ ಮಾತ್ರ ಸೀಮಿತಗೊಳ್ಳು ತ್ತಿರುವಂತೆಯೇ ಇದೀಗ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ (ಸಂಸ್ಥಾಪನಾ ಶಾಖೆ) ಪ್ರವೇಶ ದ್ವಾರದ ಮೇಲಿದ್ದ ಸಂಸ್ಥಾಪನಾ ನಿರ್ದೇಶಕರ ಫೋಟೊಗಳನ್ನು ಬ್ಯಾಂಕ್ ಆಫ್ ಬರೋಡಾ ತೆರವುಗೊಳಿಸಲಾಗಿದೆ.

ನಗರದ ಅಂಬೇಡ್ಕರ್ ವೃತ್ತ(ಜ್ಯೋತಿ)ದ ಬಳಿಯ ವಿಜಯ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಲ್ಲಿ ಇದೀಗ ಬ್ಯಾಂಕ್‌ನ ಸಂಸ್ಥಾಪಕ ನಿರ್ದೇಶಕರ ಫೋಟೊಗಳನ್ನು ತೆಗೆದು ಆ ಜಾಗ ಖಾಲಿಯಾಗಿದೆ. ಫೋಟೋಗಳನ್ನು ಬೆಂಗಳೂರಿನ ಮ್ಯೂಸಿಯಂನಲ್ಲಿ ಇಡಲಾಗುವುದು ಎಂಬ ಮಾಹಿತಿ ದೊರಕಿದೆ. ಸದ್ಯ ಬ್ಯಾಂಕ್‌ನ ಒಳ ಸಭಾಂಗಣದಲ್ಲಿ ಎಬಿ ಶೆಟ್ಟಿ ಹಾಗೂ ಸುಂದರರಾಮ ಶೆಟ್ಟಿಯವರ ಫೋಟೊಗಳಿವೆ. ಆದರೆ ಹೊರಭಾಗದಲ್ಲಿದ್ದ ನಿರ್ದೇಶಕರ ಫೋಟೋಗಳು ಮಾತ್ರ ತೆರವಾಗಿದೆ. ಕರಾವಳಿಯ ಅಸ್ಮಿತೆಯ ಪ್ರತೀಕದಂತಿದ್ದ ಬ್ಯಾಂಕ್ ಈಗಾಗಲೇ ಹೆಸರು ಬದಲಾವಣೆಗೊಂಡಿದೆ. ಸದ್ಯ ಕೆಲವು ಶಾಖೆಗಳಲ್ಲಿ ವಿಜಯ ಬ್ಯಾಂಕ್‌ನ ಹೆಸರು ಇದೆಯಾದರೂ, ನಿಧಾನಗತಿಯಲ್ಲಿ ಅದೂ ಕಣ್ಮರೆಯಾಗಬಹುದು. ಗ್ರಾಮೀಣ ಜನರ ಪಾಲಿಗೆ ಆಶಾಕಿರ ಣವಾಗಿ ಸ್ಥಾಪನೆಗೊಂಡು, ಕರಾವಳಿಯ ರೈತರು, ಜನಸಾಮಾನ್ಯರ ಬ್ಯಾಂಕ್ ಆಗಿ ಗುರುತಿಸಿಕೊಂಡಿದ್ದ ಬ್ಯಾಂಕ್ ವಿಲೀನೀಕರಣದಿಂದಾಗಿ ಇಂದು ಕೇವಲ ನೆನಪಿಗಷ್ಟೇ ಸೀಮಿತಗೊಳ್ಳುತ್ತಾ ಸಾಗಿದೆ.

‘‘ಒಂದು ವಾರದ ಹಿಂದಷ್ಟೇ ಬ್ಯಾಂಕ್‌ನ ಪ್ರವೇಶ ದ್ವಾರದ ಬಳಿ ಇದ್ದ ಬ್ಯಾಂಕ್‌ನ ಸಂಸ್ಥಾಪನಾ ನಿರ್ದೇಶಕರ ಫೋಟೊಗಳನ್ನು ತೆಗೆಯಲಾಗಿದೆ. ಬೆಂಗಳೂರಿನ ಮ್ಯೂಸಿಯಂನಲ್ಲಿ ಆ ಫೋಟೋಗಳನ್ನು ಭದ್ರವಾಗಿರಿಸಲಾಗುವುದು’’ ಎಂದು ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕ ಸುಹಾಸ್ ಎಂಬವರು ಮಾಹಿತಿ ನೀಡಿದ್ದಾರೆ.

ಪ್ರಗತಿಪರ ರೈತರ ಸಹಕಾರದಲ್ಲಿ ಹುಟ್ಟಿಕೊಂಡ ಬ್ಯಾಂಕ್ 1931ರ ಅ.23ರಂದು ಬಂಟ್ಸ್ ಹಾಸ್ಟೆಲ್ ಸಮೀಪದ ಸಣ್ಣ ಕೊಠಡಿಯಲ್ಲಿ ಪ್ರಗತಿಪರ ರೈತರ ಸಹಕಾರದೊಂದಿಗೆ ಅತ್ತಾವರ ಬಾಲಕೃಷ್ಣ ಶೆಟ್ಟಿ (ಎ.ಬಿ. ಶೆಟ್ಟಿ) ಈ ಬ್ಯಾಂಕನ್ನು ಹುಟ್ಟು ಹಾಕಿದ್ದರು. ತುಳುನಾಡಿನಲ್ಲಿ ಕೃಷಿಕರ ಅನುಕೂಲಕ್ಕಾಗಿ ಹುಟ್ಟಿಕೊಂಡ ವಿಜಯ ಬ್ಯಾಂಕ್‌ಗೆ ಆಧುನಿಕ ಸ್ಪರ್ಶ ನೀಡಿ ಗ್ರಾಹಕರನ್ನು ಸೆಳೆಯುವಲ್ಲಿ ಮುಲ್ಕಿ ಸುಂದರ ರಾಮ ಶೆಟ್ಟಿ ಯಶಸ್ವಿಯಾಗಿದ್ದರು. ಮಂಗಳೂರಿನ ಪ್ರತಿಷ್ಠಿತ ಜಯಲಕ್ಷ್ಮಿ ಬ್ಯಾಂಕ್ ಸೇರಿದಂತೆ ಸುಮಾರು 14 ಬ್ಯಾಂಕ್‌ಗಳು ವಿಜಯ ಬ್ಯಾಂಕ್ ಜತೆ ವಿಲೀನಗೊಂಡು, 1975ರಲ್ಲಿ ಒಂದೇ ದಿನ 27 ಶಾಖೆಗಳನ್ನು ತೆರೆದ ಹೆಗ್ಗಳಿಕೆ ವಿಜಯ ಬ್ಯಾಂಕ್‌ನದ್ದಾಗಿದೆ. ಪ್ರಗತಿಪರ ರೈತರಿಂದ ಆರಂಭಗೊಂಡ ವಿಜಯ ಬ್ಯಾಂಕ್‌ನ ಪ್ರಧಾನ ಕಚೇರಿ 1969ರವರೆಗೆ ಬಂಟ್ಸ್ ಹಾಸ್ಟೆಲ್ ಬಳಿಯೇ ಇತ್ತು. ಬಳಿಕ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಒಟ್ಟು 2129 ಶಾಖೆಗಳ ಪೈಕಿ 583 ಶಾಖೆಗಳು ಕರ್ನಾಟಕದಲ್ಲಿತ್ತು. ಅದರಲ್ಲೂ ಕರಾವಳಿಯಲ್ಲಿ (ಉಡುಪಿಯಲ್ಲಿ 63 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 79) ಒಟ್ಟು 142 ಶಾಖೆಗಳನ್ನು ವಿಜಯ ಬ್ಯಾಂಕ್ ಹೊಂದಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English