ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಜಿಲ್ಲಾಧಿಕಾರಿಯವರು ಅಧಿಕೃತ ಜಾನುವಾರು ಸಾಗಾಟ ವ್ಯವಸ್ಥೆಗಾಗಿ ಆ್ಯಪೊಂದನ್ನು ಅಭಿವೃದ್ಧಿ ಮಾಡಿದ್ದಾರೆ. ಜಾನುವಾರು ಸಾಗಾಟ ಮಾಡುವವರು ಈ ಆ್ಯಪ್ ಮುಖಾಂತರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಈ ಮೂಲಕ ನಾವು ಸಾಗಾಟಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ ಹನುಮಂತರಾಯ ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಧಿಕೃತ ಜಾನುವಾರು ಸಾಗಾಟಕ್ಕೆ ಕಡಿವಾಣ ಹಾಕಲು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಯಾರೂ ಕಾನೂನು ಕ್ರಮವನ್ನು ಕೈಗೆತ್ತಿಕೊಳ್ಳಬಾರದು. ಯಾವುದೇ ಮಾಹಿತಿ ಇದ್ದರೂ ನಮಗೆ ತಿಳಿಸಿ, ಶಾಂತಿಯುತವಾಗಿ ಹಬ್ಬ ಆಚರಿಸಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.
ಶುಕ್ರವಾರ ಬೆಳಗ್ಗೆ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ 27 ಕರೆಗಳು ಬಂದಿದ್ದು, ಸಾರಿಗೆ ವ್ಯವಸ್ಥೆಗೆ ಸಂಬಂಧ ಪಟ್ಟಂತೆ ಹೆಚ್ಚಿನ ದೂರುಗಳು ಬಂದಿದ್ದವು. ಬಿಜೈ ಆನೆಗುಂಡಿ ಬಳಿ ಭಾರತೀ ಅಪಾರ್ಟ್ಮೆಂಟ್ ಎದುರಿನ ರಸ್ತೆ ಬದಿಯಲ್ಲಿ ಬೆಳಗ್ಗೆ 7.30-10.30 ಸಂಜೆ 4.30-8ರವರೆಗೆ 25ರಷ್ಟು ಇನ್ನೋವಾ ಹಾಗೂ ಇತರ ಟ್ಯಾಕ್ಸಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ ಎಂದು ದೂರು ನೀಡಿದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತರು ಹೇಳಿದರು.
Click this button or press Ctrl+G to toggle between Kannada and English