ಉಡುಪಿ : ನರ್ಮ್ ಬಸ್ಸು ತಂಗುದಾಣ ಶೀಘ್ರದಲ್ಲೇ ಆರಂಭ

12:02 PM, Saturday, September 14th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Udupiಉಡುಪಿ : ಉಡುಪಿ ಸಿಟಿ ಬಸ್‌ ತಂಗುದಾಣದ ಸಮೀಪ ನರ್ಮ್ ಬಸ್ಸು ತಂಗುದಾಣ ಶೀಘ್ರದಲ್ಲೇ ಆರಂಭವಾಗಲಿದೆ. ಅಕ್ಟೋಬರ್‌ 2017ರಲ್ಲಿ ಇದರ ಕಾಮಗಾರಿ ಆರಂಭವಾಗಿದ್ದು, ಇದೀಗ ಉದ್ಘಾಟನೆಗೆ ಸಜ್ಜುಗೊಂಡಿದೆ.

4 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕಟ್ಟಡವು ಸುಮಾರು 41 ಸೆಂಟ್ಸ್‌ ಜಾಗದಲ್ಲಿದ್ದು 3 ಅಂತಸ್ತುಗಳನ್ನು ಒಳಗೊಂಡಿದೆ. ಕೆಳಅಂತಸ್ತಿನಲ್ಲಿ 6,814 ಚದರಡಿ ವಿಸ್ತೀರ್ಣ ಹೊಂದಿದೆ. ಮೇಲಿನ ಅಂತಸ್ತು 5,807 ಚದರಡಿ ವಿಸ್ತೀರ್ಣ ಹೊಂದಿದೆ. ಮೊದಲ ಅಂತಸ್ತು 5,637 ಚದರಡಿ ವಿಸ್ತೀರ್ಣ ಹೊಂದಿದೆ. ಕಟ್ಟಡದ ಒಟ್ಟು ವಿಸ್ತೀರ್ಣವು 18,258 ಚದರಡಿ ಇದೆ.

ಕೇವಲ ಬಸ್ಸು ತಂಗುದಾಣ ಮಾತ್ರವಲ್ಲದೆ ವಾಣಿಜ್ಯ ಬಳಕೆಗೆ ಉಪಯೋಗವಾಗುವಂತೆ ಮಾಡುವ ಮೂಲಕ ಆದಾಯ ಗಳಿಸುವ ಇರಾದೆಯನ್ನು ಕೆಎಸ್ಸಾರ್ಟಿಸಿ ಹೊಂದಿದೆ. ಕ್ಯಾಂಟಿನ್‌ ಸಹಿತ ಇನ್ನಿತರ ವಸ್ತುಗಳ ಮಾರಾಟದ ಅಂಗಡಿಗಳು ಈ ಮಳಿಗೆಯಲ್ಲಿ ಕಾರ್ಯಾಚರಿಸಲಿವೆ.

ವಾಣಿಜ್ಯ ವ್ಯವಹಾರಕ್ಕೆಂದು ಕೆಳ ಅಂತಸ್ತಿನಲ್ಲಿ 3,889ಚದರಡಿ ವಿಸ್ತೀರ್ಣ, ಮೇಲಂತಸ್ತಿನಲ್ಲಿ 3,049 ಚದರಡಿ ವಿಸ್ತೀರ್ಣ ಹಾಗೂ ಮೊದಲ ಅಂತಸ್ತಿನಲ್ಲಿ 4,390 ಚದರಡಿ ಸಹಿತ ಒಟ್ಟು 11,328 ಚದರಡಿ ವಿಸ್ತೀರ್ಣ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆಂದು ಮೀಸಲಿರಿಸಲಾಗಿರುವುದು ಕಟ್ಟಡದ ವೈಶಿಷ್ಟವಾಗಿದೆ.

ಕಟ್ಟಡದ ತಳಂತಸ್ತಿನಲ್ಲಿ ಏಕಕಾಲದಲ್ಲಿ 10 ಬಸ್ಸುಗಳು ನಿಲುಗಡೆಯಾಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ 12 ಕಾರು ಹಾಗೂ 20 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕರಿಗಾಗಿ ಇರುವ ತಂಗುದಾಣ ಸಹಿತ ಕಟ್ಟಡಕ್ಕೆ ಎಸಿ ಅಳವಡಿಸುವ ಬಗ್ಗೆಯೂ ಚಿಂತನೆ ಇದೆ. ಈ ಪ್ರಕ್ರಿಯೆ ಸದ್ಯಕ್ಕೆ ಆಗದಿದ್ದರೂ ಮುಂಬರುವ ದಿನಗಳಲ್ಲಿ ವಹಿವಾಟು ನೋಡಿಕೊಂಡು ಆರಂಭಿಸುವ ಸಾಧ್ಯತೆ ಇದೆ. ಎಸಿ, ಟಿವಿಗಳನ್ನು ಅಳವಡಿಸುವ ಮೂಲಕ ಬಸ್ಸು ತಂಗುದಾಣಕ್ಕೆ ಹೈಟೆಕ್‌ ಸ್ಪರ್ಶ ನೀಡುವ ಪ್ರಸ್ತಾವವೂ ಇದೆ.

ನಗರದಲ್ಲಿ 2016ರಿಂದ ನರ್ಮ್ ಬಸ್‌ಗಳ ಓಡಾಟವಿದ್ದು ಉತ್ತಮ ಸೇವೆ ನೀಡುವ ಮೂಲಕ ಈಗಾಗಲೇ ಜನಮನ್ನಣೆ ಗಳಿಸಿದೆ. ಪ್ರಸ್ತುತ 30 ನರ್ಮ್ ಬಸ್ಸುಗಳಿದ್ದು ಇನ್ನೂ ಹೆಚ್ಚಿನ ಕಡೆಗಳಿಗೆ ಬಸ್ಸು ಹಾಕಬೇಕೆಂಬ ಬೇಡಿಕೆಯೂ ಸಾರ್ವಜನಿಕರಿಂದ ಬಂದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಿ ಆದ್ಯತೆಯ ಮೇರೆಗೆ ಬಸ್ಸುಗಳನ್ನು ಹಾಕಲಾಗುವುದು ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಆಶಯವನ್ನು ಕೆಎಸ್ಸಾರ್ಟಿಸಿ ಹೊಂದಿದೆ. ಹೊಸ ಪರಿಕಲ್ಪನೆ ಮಾದರಿಯಲ್ಲಿ ಈ ಬಸ್ಸು ತಂಗುದಾಣವನ್ನು ನಿರ್ಮಿಸಲಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಕೆಎಸ್ಸಾರ್ಟಿಸಿ ಕಾಮಗಾರಿ ಯೋಜನೆಯ ಪ್ರಕಾರ 2018ರಲ್ಲೇ ಈ ಬಸ್ಸು ತಂಗುದಾಣದ ಕಾಮಗಾರಿ ಮುಗಿಯಬೇಕಿತ್ತು. ಆದರೆ ಮರಳು ಅಭಾವದಿಂದ ಕಾಮಗಾರಿ ತುಸು ವಿಳಂಬವಾಗಿದೆ. ಈಗಾಗಲೇ ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಇಲ್ಲಿ ಸೇವೆ ಲಭ್ಯವಾಗಲಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English