ಕಾರವಾರ : ರೈಲ್ವೆಯಲ್ಲಿ ತಪಾಸಣೆ ವೇಳೆಯಲ್ಲಿ ವಾರಸುದಾರರಿಲ್ಲದ ಬ್ಯಾಗ್ ಪರಿಶೀಲನೆ ನಡೆಸಿದಾಗ ಸುಮಾರು 6.30 ಕೆಜಿ ಗಾಂಜಾ ರೈಲ್ವೆ ಪೊಲೀಸರಿಗೆ ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮುಂಬಯಿ ಛತ್ರಪತಿ ಶಿವಾಜಿ ಟರ್ಮಿನಲ್ ನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲು ಕಾರವಾರದ ಶಿರವಾಡ ಬಳಿ ನಿಂತಾಗ ಕರ್ತವ್ಯದಲ್ಲಿದ್ದ ಆರ್ಪಿಎಫ್ ಕಾನ್ಸ್ ಸ್ಟೇಬಲ್ ಸಾಜಿರ್ ಅವರು ಸಾಮಾನ್ಯ ಬೋಗಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸೇನಾ ಬ್ಯಾಗಿನ ಬಣ್ಣದಂಥ ಬ್ಯಾಗೊಂದು ಲಗೇಜ್ ಇಡುವ ಜಾಗದಲ್ಲಿ ಪತ್ತೆಯಾಗಿದೆ.
ಅನುಮಾನಗೊಂಡ ಪೊಲೀಸರು ಬ್ಯಾಗ್ ತೆರೆದಾಗ ಗಮ್ ಟೇಪ್ ಸುತ್ತಿದ ಪೊಟ್ಟಣವೊಂದು ಕಂಡು ಬಂದಿದೆ. ಬಳಿಕ ತಕ್ಷಣ ನಿಲ್ದಾಣದಲ್ಲಿದ್ದ ರಕ್ಷಣಾ ದಳದ ಇನ್ಸ್ ಪೆಕ್ಟರ್ ವಿನೋದಕುಮಾರ್, ಕಾನ್ಸ್ ಸ್ಟೇಬಲ್ ಗಳಾದ ಕೋಳೂರ್ ಹಾಗೂ ನರೇಂದರ್ ಅವರಿಗೆ ಮಾಹಿತಿ ನೀಡಿದ್ದರು. ಬಳಿಕ ಇಬ್ಬರು ಸಾಕ್ಷಿದಾರ ಪ್ರಯಾಣಿಕರೊಂದಿಗೆ ಬ್ಯಾಗ್ ನ ಆರ್ಪಿಎಫ್ ಕಚೇರಿಗೆ ತಂದು ತೆರೆದಾಗ ಗಾಂಜಾ ಇರುವುದು ಗೊತ್ತಾಗಿದೆ. ಬಳಿಕ ಅದನ್ನು ತೂಕ ಹಾಕಿ ಕಾರವಾರದ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೆ ರೈಲ್ವೆ ಪೊಲೀಸರು ಮುಂದಿನ ನಿಲ್ದಾಣಗಳಿಗೂ ರೈಲಿನ ಬೋಗಿಗಳಿಗೆ ತಪಾಸಣೆಗೆ ಮಾಹಿತಿ ನೀಡಿದ್ದು, ಆರೋಪಿಗಳಿದ್ದರೆ ವಶಕ್ಕೆ ಪಡೆಯಲು ಸೂಚಿಸಲಾಗಿತ್ತು. ಆದರೆ, ಯಾರೂ ಪತ್ತೆಯಾಗಿಲ್ಲ. ನಿಲ್ದಾಣಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಲಾಗುವುದು. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರನ್ನು ಕರೆ ತಂದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English