ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಪಶ್ಚಿಮ ಜಾಗರ ಪೂಜೆ

9:57 AM, Thursday, October 10th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Udupiಉಡುಪಿ : ಕೃಷ್ಣ ಮಠದಲ್ಲಿ ಬೆಳಗ್ಗಿನ ಜಾವ ಸೂರ್ಯೋದಯಕ್ಕೂ ಮುನ್ನ ನಡೆಯುವ ಪಶ್ಚಿಮ ಜಾಗರ ಪೂಜೆ ಆಶ್ವಯುಜ ಮಾಸದ ಶುಕ್ಷಪಕ್ಷದ ಏಕಾದಶಿ ದಿನವಾದ ಬುಧವಾರ ಆರಂಭವಾಗಿದ್ದು, ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನೆರವೇರಿಸಿದರು.

ಕೃಷ್ಣನಿಗೆ ನಿತ್ಯ 14 ಬಗೆಯ ಪೂಜೆಗಳೊಂದಿಗೆ ಬುಧವಾರದಿಂದ ಪಶ್ಚಿಮ ಜಾಗರ (ಜಾಗರಣೆ) ಪೂಜೆ ಸೇರ್ಪಡೆಗೊಂಡಿದ್ದು, ಇನ್ನು ಒಂದು ತಿಂಗಳು ನಿತ್ಯ 15 ಪೂಜೆ ನಡೆದು ಉತ್ಥಾನ ದ್ವಾದಶಿಯಂದು ಸಂಪನ್ನಗೊಳ್ಳಲಿದೆ.

ಬೆಳಗ್ಗೆ ನಿರ್ಮಾಲ್ಯ, ಉಷಃಕಾಲ, ಅಕ್ಷಯಪಾತ್ರೆ ಪೂಜೆ, ಪಂಚಾಮೃತ ಅಭಿಷೇಕದ ಬಳಿಕ ಪಶ್ಚಿಮ ಜಾಗರ ಪೂಜೆ ನಡೆಯಲಿದೆ. ಈ ಸಂದರ್ಭ ಕೃಷ್ಣ ಮಠದಲ್ಲಿ ಗರ್ಭಗುಡಿ ಮುಂಭಾಗ ಮತ್ತು ಸುತ್ತಲಿನ ದಳಿಗಳಲ್ಲಿ ದೀಪಗಳನ್ನು ಹಚ್ಚಲಾಗುತ್ತದೆ. ವಿಶೇಷವಾದ ಸೂರ್ಯವಾದ್ಯ ಮೊಳಗಿಸಲಾಗುತ್ತದೆ. ಪರ್ಯಾಯ ಶ್ರೀಗಳು ಮೊದಲಿಗೆ ಕೃಷ್ಣನಿಗೆ ಕೂರ್ಮಾರತಿ ಮಾಡಿ, ಬಳಿಕ ಅನುಕ್ರಮವಾಗಿ ಮುಖ್ಯಪ್ರಾಣ ದೇವರಿಗೆ, ಮಧ್ವಾಚಾರ್ಯರಿಗೆ, ಗರುಡ ದೇವರಿಗೆ ಆರತಿ ಬೆಳಗುತ್ತಾರೆ.

ನಂತರ ಉದ್ವರ್ತನ, ಕಳಶ, ತೀರ್ಥ, ಅಲಂಕಾರ, ಅವಸರ ಕನಕಾದಿ ಪೂಜೆ, ಮಹಾಪೂಜೆ ಜರುಗಲಿದೆ. ಸಾಯಂಕಾಲ ಚಾಮರ ಸೇವೆ, ರಾತ್ರಿಪೂಜೆ, ಅಷ್ಟಾವಧಾನ ಪೂಜೆ, ಶಯನೋತ್ಸವ ಯಥಾಪ್ರಕಾರ ನೆರವೇರಲಿದೆ.

ಚಾತುರ್ಮಾಸ್ಯ ಸಮಾಪನಕ್ಕೆ ಒಂದು ತಿಂಗಳು ಪೂರ್ವದಲ್ಲಿ ಕೈಗೊಳ್ಳುವ ಈ ವಿಶಿಷ್ಟ ಪೂಜೆಗೆ ಪಕ್ಷಿ ಜಾಗರ ಪೂಜೆ ಎಂದೂ ಕರೆಯುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಪಕ್ಷಿಗಳು ಎಚ್ಚರಗೊಳ್ಳುವ ಸಮಯದಲ್ಲಿ ನಡೆಸುವ ಪೂಜೆಯಾಗಿರುವುದರಿಂದ ಈ ಹೆಸರಿದೆ. ಲಕ್ಷ್ಮೀ ದೇವಿ ಪ್ರೀತ್ಯರ್ಥ ಹಾಗೂ ಯೋಗನಿದ್ರೆಯಲ್ಲಿ ಭಗವಂತನನ್ನು ಉತ್ಥಾನ ದ್ವಾದಶಿಯಂದು ಎಚ್ಚರಿಸುವ ಪೂರ್ವಭಾವಿ ಈ ಪೂಜೆ ನಡೆಸುವುದು ಸಂಪ್ರದಾಯ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English