ಮಹಾರಾಷ್ಟ್ರ ಸಮುದ್ರದಲ್ಲಿ ಮಲ್ಪೆಯ 7 ಮಂದಿಗೆ ಮೀನುಗಾರರಿಂದ ಮಾರಣಾಂತಿಕ ಹಲ್ಲೆ

10:53 AM, Thursday, October 17th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

vayuputra-boatಉಡುಪಿ : ಕರ್ನಾಟಕ ಮಹಾರಾಷ್ಟ್ರದ ಗಡಿ ಸಮಸ್ಯೆ ಬಗೆಹರಿಯುವ ಲಕ್ಷಣವೇ ಕಾಣುತ್ತಿಲ್ಲ. ಇತ್ತೀಚೆಗೆ ಸಮುದ್ರದಲ್ಲಿ ಕೂಡಾ ಕರ್ನಾಟಕ ಮೀನುಗಾರರ ಜೊತೆ ಮಹಾರಾಷ್ಟ್ರ ಕಚ್ಚಾಟ ಶುರುಮಾಡಿದೆ. ಉಡುಪಿಯಿಂದ ಕಸುಬಿಗೆ ತೆರಳಿದ ಮೀನುಗಾರರಿಗೆ ಮಹಾರಾಷ್ಟ್ರದ ಕಡಲ್ಗಳ್ಳರು ಮಾರಣಾಂತಿಕ ಹಲ್ಲೆ ಮಾಡಿ, ಮೀನು ದೋಚಿ ಅಟ್ಟಹಾಸ ಮೆರೆದಿದ್ದಾರೆ.

ಮಲ್ಪೆಯಿಂದ ತೆರಳಿ ಮಹಾರಾಷ್ಟ್ರದ ಮಾಲ್ವಾನ್ ಕಡಲ ತೀರದಲ್ಲಿ 7 ಮೀನುಗಾರರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಉಡುಪಿಯ ಮಲ್ಪೆಯ ಮೀನುಗಾರರ ಮೇಲೆ ಮಹಾರಾಷ್ಟ್ರದ ಕಡಲ್ಗಳ್ಳರು ಹಲ್ಲೆ ಮಾಡಿದ್ದಾರೆ. ಬೋಟ್ ಮೂಲಕ 200 ಮೀನುಗಾರರು ಮಲ್ಪೆಯ ಆಳಸಮುದ್ರದ ಬೋಟನ್ನು ಸುತ್ತುವರಿದು 7 ಮೀನುಗಾರರಿಗೆ ಮನಬಂದಂತೆ ಥಳಿಸಿದ್ದಾರೆ.

ಕರಾವಳಿ ಮೀನುಗಾರರು ಮೀನುಗಾರಿಕೆಗೆ ಗೋವಾ, ಮಹಾರಾಷ್ಟ್ರದ ಕಡೆ ತೆರಳುತ್ತಾರೆ. ಹೀಗೆ, ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ 4 ಆಳಸಮುದ್ರ ಬೋಟನ್ನು ಅಡ್ಡಗಟ್ಟಿದ ಕಡಲ್ಗಳ್ಳರು ಲೂಟಿ ಮಾಡಿದ್ದಾರೆ. ಸುಮಾರು 8 ಲಕ್ಷ ರೂಪಾಯಿಯ ಮೀನು, ಟಬ್, ಬಲೆಗಳು, ಜಿಪಿಎಸ್ ಮತ್ತಿತರ ಮಷೀನ್‍ಗಳನ್ನು ದೋಚಿದ್ದಾರೆ.

ರಾಜ್ಯದ ಭೂಭಾಗದಿಂದ 12 ನಾಟಿಕಲ್ ದೂರದಿಂದ ಹೊರಕ್ಕೆ ಯಾವ ರಾಜ್ಯದವರೂ ಮೀನುಗಾರಿಕೆ ಮಾಡಬಹುದು. ಅದು ರಾಷ್ಟ್ರೀಯ ವ್ಯಾಪ್ತಿಗೆ ಬರುವುದರಿಂದ ಆಕ್ಷೇಪಿಸುವಂತಿಲ್ಲ. ಆದರೆ ಮಹಾರಾಷ್ಟ್ರ ಗಡಿಯಲ್ಲಿ ಎಲ್ಲಾ ಕಾನೂನನ್ನು ಗಾಳಿಗೆ ತೂರಿ ಮಲ್ಪೆಯ ಮೀನುಗಾರರ ಮೇಲೆ ಹಲ್ಲೆ ಮಾಡಲಾಗಿದೆ.

ರಾಜ್ಯದ ಮೀನುಗಾರರ ಮೇಲೆ ಕಳೆದ ಹಲವಾರು ತಿಂಗಳಿಂದ ಮಹಾರಾಷ್ಟ್ರ ಮೀನುಗಾರರು ದೌರ್ಜನ್ಯ ನಡೆಸುತ್ತಿದ್ದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕರ್ನಾಟಕ ಗಡಿ ಪ್ರದೇಶಕ್ಕೆ ಗೋವಾ, ಮಹಾರಾಷ್ಟ್ರ, ಗುಜರಾತ್ ಮೀನುಗಾರರು ಬಂದು ಕಸುಬು ಮಾಡುತ್ತಾರೆ. ಆದರೆ ಸೌಹಾರ್ದಯುತವಾಗಿ ನಡೆಯುವ ಮೀನುಗಾರಿಕೆ ಮಹಾರಾಷ್ಟ್ರ ಗಡಿಯಲ್ಲಿ ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ಕ್ರಮ ತೆಗೆದುಕೊಳ್ಳಬೇಕಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English